Select Your Language

Notifications

webdunia
webdunia
webdunia
webdunia

ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ: ಕೈ ನಾಯಕರ ಬಂಧನಕ್ಕೆ ಡಿಕೆ ಶಿವಕುಮಾರ್ ಕಿಡಿ

ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ: ಕೈ ನಾಯಕರ ಬಂಧನಕ್ಕೆ ಡಿಕೆ ಶಿವಕುಮಾರ್ ಕಿಡಿ
bengaluru , ಮಂಗಳವಾರ, 14 ಜೂನ್ 2022 (18:08 IST)
ಬಿಜೆಪಿ ಸರ್ಕಾರ ಹೊಸ ಸಂಪ್ರದಾಯ ಆರಂಭಿಸುತ್ತಿದ್ದು, ಇದೇನು ತುರ್ತು ಪರಿಸ್ಥಿತಿಯೇ? ಇದು ಪ್ರಜಾಪ್ರಭುತ್ವದ ಸರ್ಕಾರವೇ? ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇ.ಡಿ. ಅಧಿಕಾರಿಗಳು ನನ್ನನ್ನು ಕರೆದುಕೊಂಡು ಹೋದಾಗ ಸಾವಿರಾರು ಜನ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ಬಂದಿದ್ದರು. ಆಗ ಯಾರಾದರೂ ಗಲಾಟೆ ಮಾಡಿದ್ದರಾ? ಅವರ ನೋವು, ದುಃಖ, ಬೇಸರವನ್ನು ವ್ಯಕ್ತಪಡಿಸಿದರು. ಇಡೀ ದೇಶದುದ್ದಗಲಕ್ಕೂ ನಮ್ಮ ನಾಯಕರು ತಮಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದರು.
ನಿನ್ನೆ ಪ್ರತಿಭಟನೆ ಆರಂಭವಾಗುವ ಮುನ್ನವೇ ನಮ್ಮ ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದರು. ಅವರು ಪ್ರತಿಭಟನೆಗೆ ಹೋಗುವ ಮುನ್ನವೇ ವಶಕ್ಕೆ ಪಡೆಯಲು ಯತ್ನಿಸಿದರು. ಇಂದು ನಮ್ಮ ಪಾಲಿಗೆ ಪಕ್ಷದ ಕಚೇರಿ ಮನೆ, ದೇವಾಲಯ ಇದ್ದಂತೆ. ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋದರೆ, ಅಲ್ಲೇ ಅವರನ್ನು ಬಂಧಿಸುತ್ತೇನೆ ಎಂದರೆ ಇದು ಅನ್ಯಾಯವಲ್ಲವೇ? ನಮ್ಮ ನಾಯಕರು ಯಾವ ಅಪರಾಧ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಇಂತಹ ನೀಚ ರಾಜಕಾರಣ ಹಿಂದೆಂದೂ ಕಂಡಿಲ್ಲ. ಇದು ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ. ನಾವಿದನ್ನು ಖಂಡಿಸುತ್ತೇವೆ. ನಮ್ಮ ಹೋರಾಟ ಮುಂದುವರಿಸುತ್ತೇವೆ. ನಮ್ಮ ನಾಯಕರು ತಪ್ಪು ಮಾಡಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ನೆಹರೂ, ತಿಲಕರು ಹಾಗೂ ವಲ್ಲಭಬಾಯಿ ಪಟೇಲರು ಸೇರಿ ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಇದು ಖಾಸಗಿ ಆಸ್ತಿಯಲ್ಲ, ದೇಶದ ಆಸ್ತಿ. ನಮ್ಮ ನಾಯಕರು ಕೇವಲ ಟ್ರಸ್ಟಿಯಾಗಿದ್ದಾರೆ ಎಂದು ಹೇಳಿದರು.
ಖರ್ಗೆ ಅವರು ಈಗ ಟ್ರಸ್ಟಿಯಾಗಿದ್ದಾರೆ. ಅವರೇನು ಅದರ ಆಸ್ತಿನೆಲ್ಲಾ ಬರೆದುಕೊಂಡು ಬಂದಿದ್ದಾರಾ? ನೆಹರೂ ಕುಟುಂಬದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಹೆದರುವುದಿಲ್ಲ.’
ತಪ್ಪು ಮಾಡಿಲ್ಲ ಎಂದಾದರೆ ವಿಚಾರಣೆ ಎದುರಿಸಬೇಕಲ್ಲವೇ ಎಂಬ ಬಿಜೆಪಿ ವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ‘ರಾಹುಲ್ ಗಾಂಧಿ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸುವ ಅಗತ್ಯ ಏನಿದೆ? ಎಲ್ಲ ವಿವರಗಳನ್ನು ಚುನಾವಣೆ ಅಫಿಡವಿಟ್ ನಲ್ಲಿ ನೀಡಿರಲಿಲ್ಲವೇ? ನಾನೇನು ಮಾಡಿದ್ದೆ ಎಂದು ನನ್ನನ್ನು 10 ದಿನ ವಿಚಾರಣೆ ಮಾಡಿದ್ದರು? ನಾನು ಇನ್ನು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿಲ್ಲ. ಯಾವ ರೀತಿ ಕಿರುಕುಳ ನೀಡಿದ್ದಾರೆ ಎಂಬುದು ನನಗಷ್ಟೇ ಗೊತ್ತಿದೆ. ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಆದಾಗ ಎಷ್ಟು ಹಣ ಸಿಕ್ಕವು? ಅವರ ವಿರುದ್ಧ ಪ್ರಕರಣ ಯಾಕೆ ಇಡಿಗೆ ಹೋಗಿಲ್ಲ?’ ಎಂದು ಪ್ರಶ್ನಿಸಿದರು.
ನಿನ್ನೆಯ ಪಾದಯಾತ್ರೆ ತಿಹಾರ್ ಜೈಲಿಗೆ ಹೋಗುತ್ತೆ ಎಂಬ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ದೇಶದಲ್ಲೇ ಅತ್ಯಂತ ಭ್ರಷ್ಟ ಶಿಕ್ಷಣ ಸಚಿವ. ಉಪಕುಲಪತಿಗಳಿಂದ ಪ್ರತಿ ಹುದ್ದೆ ನೇಮಕಾತಿಗೂ ಹಣ ಪಡೆದಿದ್ದಾರೆ. ಬೇರೆ ವಿಚಾರದಲ್ಲಿ ಹಣ ಪಡೆದದ್ದು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹಣ ಪಡೆದಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಮ್ಮನೆ ಇದ್ದಾರೆ. ಆತ ಏನಾದರೂ ಹೇಳಲಿ, ಮಾತನಾಡಲಿ. ಆ ಗಂಡಿಗೆ ಈಗ ಉತ್ತರ ಕೊಡುವುದಿಲ್ಲ. ಸಮಯ ಬಂದಾಗ ಕೊಡುತ್ತೇನೆ’ ಎಂದು ಹೇಳಿದರು.
ಕಾಂಗ್ರೆಸ್ ನವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಸಿ.ಟಿ ರವಿ ಅವರ ಹೇಳಿಕೆ ಕುರಿತು ಕೇಳಿದಾಗ, ‘ಯಾರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಜನಕ್ಕೆ ಗೊತ್ತಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿದರು.
ಕಾವೇರಿ ವಿಚಾರ ಚರ್ಚೆಗೆ ಅವಕಾಶ ನೀಡಬೇಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದ ಬಗ್ಗೆ ಕೇಳಿದಾಗ, ‘ಆ ರಾಜ್ಯದವರು ಏನಾದರೂ ಮಾಡಿಕೊಳ್ಳಲಿ. ನಮ್ಮ ನೀರು, ನಮ್ಮ ಹಕ್ಕು. ನಮ್ಮ ಹೋರಾಟ, ಬದ್ಧತೆ ನಮ್ಮ ಜನರ ಪರವಾಗಿರಬೇಕು. ಬೆಂಗಳೂರು ಜನರ ಕುಡಿಯುವ ನೀರು ಹಾಗೂ ಕಾವೇರಿ ಪ್ರದೇಶದ ರೈತರ ಹಿತಕ್ಕಾಗಿ ಮೇಕೆದಾಟು ಯೋಜನೆ ಮಾಡಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಮಣಿದು 1 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಯೋಜನೆಗೆ ಬೇರೆ ರಾಜ್ಯದ ಅನುಮತಿ ಬೇಕಾಗಿಲ್ಲ. ಅವರು ಏನಾದರೂ ಬರೆದುಕೊಳ್ಳಲಿ, ಈ ರಾಜ್ಯ ಸರ್ಕಾರ ಪ್ರಧಾನಿಗಳ ಬಳಿ ಸರ್ವ ಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಲಿ, ನಿಮಗೆ ಕೇಂದ್ರ ಸಚಿವರ ಜತೆ ಮಾತನಾಡುವ ಧೈರ್ಯ ಇಲ್ಲದಿದ್ದರೆ, ನಾವು ಮಾತನಾಡುತ್ತೇವೆ. ಈ ಯೋಜನೆ ಆಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ. ಇದು ನಮ್ಮ ನೆಲದಲ್ಲಿ, ನಮ್ಮ ಜಲ ಬಳಸಿಕೊಳ್ಳಲು ನಮ್ಮ ಹಣದಲ್ಲಿ ಮಾಡುತ್ತಿರುವ ಯೋಜನೆ. ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲ ಆಗಲಿದೆಯಾದರೂ ಸುಮ್ಮನೆ ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ಅನೇಕ ಸಣ್ಣ ಆಣೆಕಟ್ಟು ಕಟ್ಟಿ ಇಡೀ ಕೃಷ್ಣಗಿರಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಕುಡಿಯುವ ನೀರು ಪೂರೈಸಲು ಸಮತೋಲಿತ ಜಲಾನಯನ ಯೋಜನೆ ಮಾಡುತ್ತಿದ್ದೇವೆ. ಈ ಯೋಜನೆ ನೀರನ್ನು ಕೃಷಿಗೆ ಬಳಸಿಕೊಳ್ಲುವುದಿಲ್ಲ. ಇದರಿಂದ ತಮಿಳುನಾಡಿನ ಪಾಲಿನ ನೀರಿಗೂ ಯಾವುದೇ ಅಡ್ಡಿಯಾಗುವುದಿಲ್ಲ. ’ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೇಕೆದಾಟು ಯೋಜನೆ ಕುರಿತು ತಮಿಳುನಾಡು ರಾಜಕೀಯ ಸ್ಟಂಟ್: ಸಿಎಂ ಬೊಮ್ಮಾಯಿ