ಈ ಬಾರಿ ಮುಂಗಾರು ಆಗಮನ ವಿಳಂಬವಾಗಿದೆ. ಇನ್ನೊಂದೆಡೆ ಬೇಸಗೆ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬಿಸಿಲ ಝಳವೂ ಹೆಚ್ಚಾಗಿ ತತ್ತರಿಸುವಂತಾಗಿದೆ. 2019ರಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.ಕಳೆದ ಕೆಲ ವರ್ಷಗಳ ಬಳಿಕ 2023ರಲ್ಲಿ ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ತೀರಾ ವಿಳಂಬವಾಗಿ ಆಗಮಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮಾಹಿತಿಯಂತೆ ರಾಜ್ಯ ಕರಾವಳಿಗೆ ಜೂನ್ 8ರ ಬಳಿಕ ಮುಂಗಾರು ಪ್ರವೇಶ ಪಡೆಯಲಿದೆ.
ಕಳೆದ ವರ್ಷ ಮೇ 29ಕ್ಕೆ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿದ ಎರಡರಿಂದ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ ಸದ್ಯ ಆ ರೀತಿಯ ವಾತಾವರಣ ಇಲ್ಲ. ಇನ್ನು 4-5 ದಿನಗಳ ಒಳಗಾಗಿ ಕೇರಳ ಕರಾವಳಿ ಭಾಗಕ್ಕೆ ಮುಂಗಾರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಬಳಿಕ ಎರಡರಿಂದ ಮೂರು ದಿನಗಳ ಒಳಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಉತ್ತಮ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ