ಬೆಂಗಳೂರು: ಸತತ ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಿ. ಪರಮೇಶ್ವರ, ಈಗ ಅದೇ ಗದ್ದುಗೆಯಲ್ಲಿ ಮುಂದುವರೆದು ಮುಂಬರುವ ಚುನಾವಣೆ ಎದುರಿಸುವ ಚಿಂತನೆಯಲ್ಲಿದ್ದಾರೆ.
ಅದರ ಆರಂಭಿಕ ಹೆಜ್ಜೆಯೇ ನಾಲ್ಕು ದಿನದ ಹಿಂದೆ ನಡೆದ ಸುರಾಜ್ಯ ಸಮಾವೇಶ. ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಿಟ್ಟುಕೊಂಡು ಈ ಸಮಾವೇಶ ಏರ್ಪಡಿಸಲಾಗಿತ್ತು. ಮತ್ತೊಂದು ಬಾರಿ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯಬೇಕೆಂದರೆ ಪರಮೇಶ್ವರ ಅವರಿಗೆ ಈ ಸಮಾವೇಶ ಅನಿವಾರ್ಯವೂ ಆಗಿತ್ತು. ಯಾಕೆಂದರೆ, ತನ್ನ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಹೇಗೆ ಒಗ್ಗಟ್ಟಿನಲ್ಲಿದೆ ಎಂದು ಹೈಕಮಾಂಡ್ ಗೆ ಅವರು ಸಂದೇಶ ರವಾನಿಸಬೇಕಿತ್ತು. ಅದಕ್ಕೂ ಮುಖ್ಯವಾಗಿ ತನ್ನ ಶಕ್ತಿ, ಸಾಮರ್ಥ್ಯ ಏನೆಂಬುದನ್ನು ಸ್ವ ಪಕ್ಷೀಯ ಇತರ ಮುಖಂಡರಿಗೂ ತೋರಿಸಬೇಕಿತ್ತು. ಒಂದೇ ಗುಂಡಿನಲ್ಲಿ ಎರಡು ಹಕ್ಕಿ ಹೊಡೆಯುವ ಉದ್ದೇಶವೇ ಈ ಸಾರ್ಥಕ ಸಮಾವೇಶ.
ಹೌದು, ಜಿ. ಪರಮೇಶ್ವರ ಕಾಂಗ್ರೆಸ್ ನ ಒಬ್ಬ ಅನುಭವಿ ಹಾಗೂ ಸಜ್ಜನ ರಾಜಕಾರಣಿ. ಪ್ರಭಾವಿ ದಲಿತ ಮುಖಂಡರಯ ಕೂಡಾ. ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ ೨೦೧೩ ರ ವಿಧಾನಸಭಾ ಚುನಾವಣೆ ಎದುರಿಸಿ, ನಿರೀಕ್ಷಿಸದ ರೀತಿಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಸಂದರ್ಭದಲ್ಲಿ ಅವರೊಬ್ಬ ಸಚಿವ ಆಕಾಂಕ್ಷಿ ಎನ್ನುವುದನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಕೂಡಾ ಮರೆತು ಬಿಟ್ಟಿತು. ಅಂದಿನಿಂದ ಆರಂಭವಾದ ಸ್ವಪಕ್ಷೀಯ ವೈಮನಸ್ಸು ನಿಧಾನವಾಗಿ ಬಹಿರಂಗವಾಗುತ್ತ ಸಾರ್ವಜನಿಕ ವೇದಿಕೆಯಲ್ಲೂ ಪ್ರದರ್ಶಿತವಾಗುತ್ತಿತ್ತು. ಪರಿಣಾಮ ಸಿದ್ದರಾಮಯ್ಯ ದಲಿತ ವಿರೋಧಿ ಮುಖ್ಯಮಂತ್ರಿ ಎಂದು ಹಣೆಪಟ್ಟಿ ಕಟ್ಟಿಕೊಂಡರು.
ಆಡಳಿತದಲ್ಲಿ ಇದೆಲ್ಲ ಸಾಮಾನ್ಯ ಎನ್ನುತ್ತಲೇ ಸಿದ್ದರಾಮಯ್ಯ ಮುಂದುವರಿಯುತ್ತಿದ್ದರು. ಕೊನೆಕೊನೆಗೆ ದಲಿತ ವಿರೋಧಿ ಎನ್ನುವ ಕೂಗು ಅವರಿಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿತು. ಆಗ ಅನಿವಾರ್ಯವಾಗಿ ಎಚ್ವೆತ್ತುಕೊಳ್ಳಬೇಕಾದ ಸಿಎಂ, ಗೃಹ ಸಚಿವ ಹುದ್ದೆಯನ್ನು ಜಿ. ಪರಮೇಶ್ವರ ಅವರ ಮಡಿಲಿಗೆ ಹಾಕಿ, ದಲಿತ ವಿರೋಧಿ ಕೂಗನ್ನು ಶಮನ ಮಾಡಿದರು. ಪರಮೇಶ್ವರ ಸಚಿವ ಹುದ್ದೆ ಅಲಂಕರಿಸಿದ್ದರೂ ಸಾಕಷ್ಟು ಸವಾಲುಗಳನ್ನು ಎದುರಿಸಿದ ಧೀಮಂತ ವ್ಯಕ್ತಿ. ನೋವು, ನಿರಾಶೆಯ ಜೊತೆ ಜೊತೆಗೆ ತನ್ನವರನ್ನೆಲ್ಲ ಒಂದೇ ದೋಣಿಯಲ್ಲಿ ಕರೆದೊಯ್ಯಬೇಕಾದ ಗುರುತರ ಜವಾಬ್ದಾರಿ ಅವರದ್ದಾಗಿತ್ತು. ಅಂದರೆ, ಸಚಿವ ಹುದ್ದೆ ತಾತ್ಕಾಲಿಕ, ಕೆಪಿಸಿಸಿ ಹುದ್ದೆ ತುಸು ನಿರಂತರ ಎನ್ನುವ ಯೋಚನೆ ಅವರದ್ದು.
ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮಾನವಾದ ಹುದ್ದೆ ಕೆಪಿಸಿಸಿ ಅಧ್ಯಕ್ಷ. ಇದು ಕಾಂಗ್ರೆಸ್ ನಲ್ಲಿ ಪರಂಪರಾಗತವಾಗಿ ಬೆಳೆದುಬಂದದ್ದು. ಪಕ್ಷಕ್ಕೆ ಸಂಬಂಧಪಟ್ಟ ಏನೇ ತೀರ್ಮಾನ ಕೈಗೊಳ್ಳುವುದಿದ್ದರೂ ಅಧ್ಯಕ್ಷರ ಸಮ್ಮುಖವೇ ನಡೆಯಬೇಕು. ಹೀಗಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಂದವರು ಅಧ್ಯಕ್ಷರನ್ನು ಎಡತಾಕಲೇಬೇಕು. ಅಲ್ಲದೆ, ಪರಮೇಶ್ವರ ಹೈಕಮಾಂಡ್ ಜೊತೆಗೂ ಉತ್ತಮ ಸಂಬಂಧವಿರಿಸಿಕೊಂಡ ವ್ಯಕ್ತಿ. ಇವುಗಳ ನಡುವೆ ದಲಿತ ಮುಖಂಡ ಶ್ರೀನಿವಾಸ ಪ್ರಸಾದ ಪಕ್ಷ ತೊರೆದದ್ದು ಇವರಿಗೆ ಪ್ಲಸ್ ಪಾಯಿಂಟ್. ಶ್ರೀಪ್ರ ಹೋಗುವಾಗ ಸಿದ್ದರಾಮಯ್ಯರ ವಿರುದ್ಧ ಸಮಾರ ಸಾರಿದ್ದಲ್ಲದೆ, ತೊಡೆತಟ್ಟಿ ರಣ ಕಹಳೆ ಊದಿದ್ದಾರೆ. ಕಾಂಗ್ರೆಸ್ ನಲ್ಲಿ ಸದ್ಯ ದಲಿತ ಮುಖಂಡರೆಂದು ಇರುವವರು ಜಿ. ಪರಮೇಶ್ವರ ಅವರೊಬ್ಬರೇ ಆಗಿರುವುದರಿಂದ, ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ ಅವರನ್ನು ಕೆಪಿಸಿಸಿ ಹುದ್ದೆಯಿಂದ ಕೆಳಗಿಳಿಸುವ ಸಾಹಸಕ್ಕೆ ಹೈಕಮಾಂಡ್ ಕೈಹಾಕದು.
ಏನೇ ಇರಲಿ ಸಾರ್ಥಕ ಸಮಾವೇಶದ ಮೂಲಕ ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ ಮತ್ತು ಎಸ್.ಆರ್. ಪಾಟೀಲ್ ಅವರಿಗೆ ಜಿ. ಪರಮೇಶ್ವರ ಪರೋಕ್ಷವಾಗಿ, ಆ ಹುದ್ದೆಯಲ್ಲಿ ನಾನೇ ಮುಂದುವರಿಯುತ್ತೇನೆ ಎಂದು ತಿಳಿಸಿಕೊಟ್ಟಿದ್ದಂತೂ ಸತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ