Webdunia - Bharat's app for daily news and videos

Install App

ಕರ್ನಾಟಕ ರಾಜ್ಯವು ಶೀಘ್ರ ಸಂಪೂರ್ಣ ಸಾಕ್ಷರ ನಾಡು ಆಗಬೇಕು: ಬಿ.ಸಿ ನಾಗೇಶ್

Webdunia
ಗುರುವಾರ, 16 ಸೆಪ್ಟಂಬರ್ 2021 (20:14 IST)
ಕೇಂದ್ರ, ರಾಜ್ಯ ಸರ್ಕಾರದ ಲೋಕ ಶಿಕ್ಷಣ ನಿರ್ದೇಶನಾಲಯ ಜೊತೆಗೆ ಶಿಕ್ಷಣ ಇಲಾಖೆಯ ವಿವಿಧ ವಿಭಾಗಗಳ ಸಂಯೋಜನೆಯೊಂದಿಗೆ, ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಕರ ನೆರವಿನೊಂದಿಗೆ ಕರ್ನಾಟಕ ರಾಜ್ಯವನ್ನು ‘ಸಂಪೂರ್ಣ ಸಾಕ್ಷರ ನಾಡು’ ಆಗಿ ಪರಿವರ್ತಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಹೇಳಿದರು.
 
ಲೋಕ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ವತಿಯಿಂದ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಮಂಗಳವಾರ (ಸೆ.14) ಆಯೋಜಿಸಲಾಗಿದ್ದ 55ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ/ಸಪ್ತಾಹ-2021ಕ್ಕೆ ಸಚಿವರು ಚಾಲನೆ ನೀಡಿದರು. ನಂತರ, ‘ಬಾಳಿಗೆ ಬೆಳಕು’ ಪ್ರಾಥಮಿಕೆ ಮತ್ತು ‘ಬರೆಯೋಣ ಬನ್ನಿ’ ಅಭ್ಯಾಸ ಪುಸ್ತಕ ಬಿಡುಗಡೆ, ಪರಿಷ್ಕೃತ ಬೋಧನಾ ಸಾಮಗ್ರಿಗಳ ಅರ್ಪಣೆ ಮತ್ತು ಕೇಂದ್ರ ಸರ್ಕಾರದ ‘ಪಢನಾ ಲಿಖನಾ’ (ಓದು, ಬರಹ) ಅಭಿಯಾನ ಹಾಗೂ 2021-22ನೇ ಸಾಲಿನ ಜಿಲ್ಲಾ ವಲಯದ ಲಿಂಕ್ ಅನುದಾನ ಸಾಕ್ಷರತಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸಚಿವರಾದ ಬಿ.ಸಿ ನಾಗೇಶ್ ಮಾತನಾಡಿದರು.
 
‘ಕೋವಿಡ್ ಕಾರಣ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ವಯಸ್ಕರ ಶಿಕ್ಷಣ, ಸಾಕ್ಷರತೆ ಯೋಜನೆಗಳನ್ನು ಪುನಾರಂಭಿಸಲಾಗಿದೆ. ಸಾಕ್ಷರತೆ ಕಾರ್ಯಕ್ರಮಗಳ ಯಶಸ್ಸಿಗೆ ಈ ವರ್ಷ ವಿಶೇಷವಾಗಿ ಒತ್ತು ನೀಡಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ಅನಕ್ಷರಸ್ಥರನ್ನು ಗುರುತಿಸಿ, ಅವರಿರುವ ಕಡೆಗಳಲ್ಲಿ ಕಲಿಕಾ ಕೇಂದ್ರಗಳನ್ನು ಆರಂಭಿಸಿ ಪಾಠ ಮಾಡಲಾಗುತ್ತದೆ. ಅವರಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 120 ತಾಸುಗಳ ಅವಧಿಗೆ ತರಗತಿಗಳನ್ನು  ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿರುವ  ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪಢನಾ/ಲಿಖನಾ (ಓದು, ಬರಹ) ಅಭಿಯಾನಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದರು.
 
‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಭಾರತ ಆಚರಿಸುತ್ತಿದೆ. ಇಷ್ಟು ವರ್ಷಗಳಾದರೂ ಕರ್ನಾಟಕದಂತಹ ರಾಜ್ಯದಲ್ಲಿ ಅನಕ್ಷರತೆ ಇರುವುದು ನಾವು ಗಂಭೀರವಾಗಿ ಯೋಚಿಸಬೇಕಾದ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕ ಜವಾಬ್ದಾರಿಯುತವಾಗಿ ತನ್ನ ಕರ್ತವ್ಯಗಳನ್ನು ಅರಿತು ಪಾಲಿಸಲು ಮತ್ತು ಹಕ್ಕುಗಳನ್ನು ಚಲಾಯಿಸಲು ಅಕ್ಷರ ಜ್ಞಾನ ಹೊಂದಿರಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳನ್ನು ನಾಗರಿಕರು ಪಡೆದುಕೊಳ್ಳಲು, ದೇಶದ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಾಕ್ಷರತೆ, ಅಕ್ಷರ ಜ್ಞಾನ ಅತ್ಯಂತ ಮುಖ್ಯವಾಗುತ್ತದೆ. ಅಕ್ಷರ ಜ್ಞಾನದಿಂದ ದೇಶ ಸುಭಿಕ್ಷವಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಯಸ್ಕರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು' ಎಂದು ಸಚಿವರು ನುಡಿದರು.
 
‘ಸರ್ಕಾರೇತರ ಸಂಸ್ಥೆಗಳು, ಮಠಗಳು, ಶಿಕ್ಷಣ ಇಲಾಖೆಯ ಬೋಧಕರನ್ನು ಬಳಸಿಕೊಂಡು ರಾಜ್ಯದಲ್ಲಿ ಅನಕ್ಷರಸ್ಥರ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕು. ಸಾಕ್ಷರತೆ ಯೋಜನೆ ಜಾರಿಗೆ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟವರು ಸೇರಿದಂತೆ ಪ್ರತಿಯೊಬ್ಬರು ಕೆಲಸ ಮಾಡಬೇಕು. ರಾಜ್ಯದಲ್ಲಿ ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು’ ಎಂದು ಬಿ.ಸಿ ನಾಗೇಶ್ ಹೇಳಿದರು.
 
‘ಒಂದೂವರೆ ವರ್ಷದ ಬಳಿಕ 6ರಿಂದ 10ನೇ ತರಗತಿಗಳ ಭೌತಿಕ ತರಗತಿಗಳನ್ನು ಪುನಾರಂಭಿಸಲಾಗಿದೆ. ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆ. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತಗಳಿಂದ ಹಿಡಿದು ಎಲ್ಲರೂ ಆಸಕ್ತಿ ವಹಿಸಿದ ಕಾರಣ ಭೌತಿಕ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಅದೇ ರೀತಿ ವಿಶೇಷ ಆಸಕ್ತಿ ತೋರಿಸಿ ವಯಸ್ಕರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ರಾಜ್ಯವನ್ನು ಸಂಪೂರ್ಣ ಸಾಕ್ಷರ ನಾಡು ಆಗಿ ಪರಿವರ್ತಿಸಲು ಶ್ರಮಿಸಬೇಕು’ ಎಂದು ಸಚಿವರು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಸುಷಮಾ ಗೋಡಬೋಲೆ, ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments