ಬೆಂಗಳೂರು: ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ತಂಡವನ್ನು ಬೆಂಗಳೂರು ಪೊಲೀಸರು ಬಲೆಗೆ ಕೆಡವಿದ್ದಾರೆ.
ಈ ಸಂಬಂಧ ಐವರು ಮೈಕೋ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗಾರೆಪಾಳ್ಯ ನಿವಾಸಿಯನ್ನು ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಟೆಕ್ಕಿಯೋರ್ವನ ಬಳಿ ಕಾರು, ಮೊಬೈಲ್, ಹಣ ಸುಲಿಗೆ ಮಾಡಿತ್ತು. ಟೆಕ್ಕಿ, ಸೂಪರ್ ಮಾರ್ಕೆಟ್ಗೆ ತರಕಾರಿ ತರಲು ಹೋಗಿದ್ದಾಗ ಗ್ಯಾಂಗ್ನ ಮಹಿಳೆ ಟೆಕ್ಕಿಗೆ ಪರಿಚಯವಾಗಿದ್ದಳು. ಬಳಿಕ, ಕುಟುಂಬಸ್ಥರನ್ನು ಪರಿಚಯಿಸಲು ಮಹಿಳೆ ಕರೆದೊಯ್ದಿದ್ದಳು.
ಟೆಕ್ಕಿಯನ್ನು ಮನೆಗೆ ಕರೆದೊಯ್ದಿದ್ದ ಆರೋಪಿ ಮಹಿಳೆ, ಬಳಿಕ ಟೆಕ್ಕಿ ಮನೆಯ ರೂಮ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಯೋಜನೆಯಂತೆ ಮನೆಗೆ ನುಗ್ಗಿದ ನಾಲ್ವರು ಆರೋಪಿಗಳು ರೂಮ್ನಲ್ಲಿದ್ದ ಟೆಕ್ಕಿ ಫೋಟೋ ತೆಗೆದು ಬೆದರಿಕೆ ಹಾಕಿದ್ದರು. 10 ಲಕ್ಷ ರೂ. ನೀಡುವಂತೆ ಯುವಕರು ಧಮ್ಕಿ ಹಾಕಿದ್ದರು. ಹಣ ನೀಡಲು ಒಪ್ಪದಿದ್ದ ವೇಳೆ ಗ್ಯಾಂಗ್ ಸುಲಿಗೆ ಮಾಡಿತ್ತು. ಟೆಕ್ಕಿ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಆರೋಪಿಗಳ ಗ್ಯಾಂಗ್ ಪರಾರಿಯಾಗಿತ್ತು.
ಈ ಬಗ್ಗೆ ಟೆಕ್ಕಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಮೈಕೋ ಲೇಔಟ್ ಪೊಲೀಸರು ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.