ರಾಯಚೂರು: ಕೆಲ ಭಾಗಗಳಲ್ಲಿ ಬಿಸಿಲಿನ ತಾಪ 43ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ಮಾತನಾಡಿದ ಅವರು, ಬಿಸಿಲು ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆಯ ಬಗ್ಗೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿಕೊಳ್ಳಲಿ. ಆದಷ್ಟು ಮಧ್ಯಾಹ್ನದ ವೇಳೆ ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಮಧ್ಯಾಹ್ನ 12ರಿಂದ 3ರ ವರೆಗೆ ಹೊರಗಿನ ಕೆಲಸವನ್ನು ಆದಷ್ಟು ಬೇಗನೇ ಮಾಡಿ ಮುಗಿಸಿ. ಆರೋಗ್ಯದ ದೃಷ್ಟಿಯಿಂದ ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ, ಸಮಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಎಂದರು.
ರಾಯಚೂರು ಜಿಲ್ಲೆ ಸೇರಿ ಈ ಭಾಗದಲ್ಲಿ 43 ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಹೋಗುತ್ತದೆ. ಮಧ್ಯಾಹ್ನ ಸಮಯದಲ್ಲಿ ಮನೆಯೊಳಗೆ ಅಥವಾ ಕಚೇರಿಯೊಳಗೆ ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಈ ಸಂಬಂಧ ಶಾಲೆಗಳು, ಎಲ್ಲಾ ಸಂಸ್ಥೆಗಳು ಆ ಬಗ್ಗೆ ಗಮನ ಕೊಡಬೇಕು. ಆಹಾರದ ಬಗ್ಗೆಯೂ ಗಮನ ಕೊಡಬೇಕು. ಆಗಾಗ ನೀರು ಕುಡಿದರೆ ನಿರ್ಜಲೀಕರಣದಿಂದ ದೂರ ಇರಬಹುದು. ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪೆಷಲ್ ವಾರ್ಡ್ ಅಗತ್ಯ ಇಲ್ಲ. ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿವೆ ಎಂದು ತಿಳಿಸಿದರು.<>