ರಾಜ್ಯದ 220ಕ್ಕೂ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಒಂದು ರೂ. ಪರಿಹಾರವನ್ನೂ ನೀಡದೆ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.ನಿನ್ನೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರೈತರಿಗೆ 2000 ರು. ಬರ ಪರಿಹಾರ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅದನ್ನೂ ಇನ್ನೂ ಕೊಟ್ಟಿಲ್ಲ ಎಂದರು.
ಕೃಷಿ ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ಗುಳೇ ಹೋಗುವುದನ್ನು ತಡೆಯಲು ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದ ಅವರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ತೋರಿಕೆಗಾಗಿ ತಾವು ರೈತರ ಪರ ಎಂದು ಬಾಯಿಮಾತಿನ ಉಪಚಾರ ಮಾಡಲಾಗುತ್ತಿದೆ ಎಂದು ಸಿ.ಟಿ.ರವಿ ಟೀಕಿಸಿದರು.. ಈಗಿನ್ನೂ ಡಿಸೆಂಬರ್ ತಿಂಗಳು ಆಗಲೆ ಮಲೆನಾಡಿನಲ್ಲೇ ಶೇ. 65ರಿಂದ 70ರಷ್ಟು ಮಳೆ ಕೊರತೆ ಆಗಿದೆ. ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ಎಂದು ಘೊಷಣೆ ಮಾಡಬೇಕು ಎಂದು ಎಷ್ಟೇ ಕೇಳಿದರೂ ಘೋಷಣೆ ಆಗಿಲ್ಲ.
ಬೇಸಿಗೆಯಲ್ಲಿ ದೇವರೇ ಕಾಪಾಡಬೇಕು. ಮನುಷ್ಯರ ಸಮಸ್ಯೆಯನ್ನೇ ಕೇಳುವವರಿಲ್ಲ. ಇನ್ನು ಮೂಕ ಪ್ರಾಣಿಗಳ ಗೋಳು ಕೇಳುವವರು ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮೂಕ ಪ್ರಾಣಿಗಳು ಹೇಗೂ ಕಟುಕರ ಪಾಲಾಗಲಿ ಎನ್ನುವ ಮನಸ್ಥಿತಿಯಲ್ಲೇ ಕೆಲಸ ಮಾಡುತ್ತಾರೆ ಎಂದರು.