ಮಂಗಳೂರು : ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಸೂಕ್ಷ್ಮ ವಿಚಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೇ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಅಂಡ್ ರಿಯಾಕ್ಷನ್ ಆಗುತ್ತೆ. ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ ಎಂದರು.
ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ನೈತಿಕತೆ ಇಲ್ಲದೆ ಬದುಕೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಇವತ್ತು ನಾವು ನೈತಿಕತೆ ಇಲ್ಲದೆ ಬದುಕೋಕೆ ಆಗಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರೋದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತೆ ಎಂದರು.
ಕಲ್ಲಿದ್ದಲು ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಕಳೆದ ವಾರ ನಮಗೆ 8 ರೇಕ್ ಬರುತ್ತಿತ್ತು. ಈಗ ಕೇಂದ್ರ ಸರ್ಕಾರದ ಜೊತೆ ಮಾತನಾಡಿದ ಮೇಲೆ 10 ರೇಕ್ ಕೊಡುವುದಾಗಿ ಹೇಳಿದ್ದಾರೆ. ಎರಡ್ಮೂರು ದಿನಗಳಲ್ಲಿ ಬರುತ್ತದೆ ಎಂದರು.
ಕೋವಿಡ್ ನಿಯಂತ್ರಣ ಮಾರ್ಗಸೂಚಿ ಸಡಿಲಿಕೆ ವಿಚಾರವಾಗಿ ಮಾತನಾಡಿದ ಅವರು, ದಸರಾ ಬಳಿಕ ಸಭೆ ಕರೆಯುತ್ತೇವೆ. ಗಡಿ ಜಿಲ್ಲೆಗಳ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಹಾಗೂ ಗಡಿ ಭಾಗದ ಲಸಿಕೆ ಪ್ರಗತಿ ಬಗ್ಗೆ ವಿಚಾರಿಸುತ್ತೇವೆ. ಇದೇ ವೇಳೆ ಪ್ರಾಥಮಿಕ ಶಾಲೆ ತೆರೆಯುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.