Select Your Language

Notifications

webdunia
webdunia
webdunia
webdunia

ದುಂಡಾವರ್ತಿಯಲ್ಲಿ ತೊಡಗಿದ ಕಾಂಗ್ರೆಸ್ ಶಾಸಕರ ಕುಟುಂಬ-ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

Udayagiri Stone Pelting Case,  Leader of Opposition in Vidhan Parishad Chaalavadi Narayanaswamy, Karnataka Congress Government,

Sampriya

ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2025 (19:39 IST)
Photo Courtesy X
ಬೆಂಗಳೂರು: ಕಾಂಗ್ರೆಸ್ ಶಾಸಕರ ಕುಟುಂಬವೇ ಆಯಾ ಕ್ಷೇತ್ರಗಳಲ್ಲಿ ದುಂಡಾವರ್ತಿಯಲ್ಲಿ ತೊಡಗಿರುವುದು ಶಾಸಕ ಸಂಗಮೇಶ್ವರ್ ಅವರ ಪುತ್ರ ಬಸವೇಶ್ ವರ್ತನೆ ಮೂಲಕ ಹೊರಕ್ಕೆ ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭದ್ರಾವತಿ ಶಾಸಕ ಸಂಗಮೇಶ್ವರ್ ಅವರ ಪುತ್ರ ಬಸವೇಶ್, ಹೆಣ್ಮಗಳು, ಸರಕಾರಿ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ಬೈದ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಅವರಿಗೆ ಬೆದರಿಕೆ ಹಾಕಿದ್ದು ವಿಡಿಯೋದಲ್ಲಿದೆ ಎಂದು ವಿವರಿಸಿದರು.

ಕಾನೂನು ಏನು ಮಾಡುತ್ತಿದೆ? ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ನಿಮ್ಮ ಶಾಸಕರು ಏನು ಮಾಡಿದರೂ ಸರಿ ಎಂಬ ಧೋರಣೆಯೇ ಎಂದು ಕೇಳಿದರು. ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಅವರನ್ನು ಈಗಾಗಲೇ ಬಂಧಿಸಬೇಕಿತ್ತು ಎಂದು ನುಡಿದರು.

ಹೆಣ್ಮಕ್ಕಳಿಗೆ ಇದೇನಾ ಗೌರವ ಕೊಡುವುದು ಎಂದು ಬೇರೆಯವರನ್ನು ಮಾತನಾಡುತ್ತಾರೆ. ಈಗ ಸರಕಾರ ನಡೆಸುವ ಕಾಂಗ್ರೆಸ್ಸಿಗರು ಇದೇನಾ ಹೆಣ್ಮಕ್ಕಳಿಗೆ ಗೌರವ ಕೊಡುವುದು ಎಂದು ಪ್ರಶ್ನಿಸಿದರು. ಶಾಸಕರ ಪುತ್ರನನ್ನು ಯಾಕೆ ಬಂಧಿಸಿಲ್ಲ? ಅವರ ವಿರುದ್ಧ ಯಾಕೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಕೇಳಿದರು.

ಕಾಂಗ್ರೆಸ್ ಎಂದರೆ ಕುಟುಂಬದ ಪಕ್ಷ. ಕುಟುಂಬದ ಎಲ್ಲರಿಗೂ ಅಧಿಕಾರ ಇರಬೇಕೆಂಬ, ದರ್ಪ ತೋರಬೇಕೆಂಬ ನಿಯಮ ಇವರದು. ಮಹಿಳಾ ನಿಂದನೆ ವಿಚಾರದಲ್ಲಿ ಸರಕಾರ ಇಷ್ಟು ತಡ ಮಾಡಬಾರದಿತ್ತು ಎಂದ ಅವರು, ಬೇರೆಯವರು ಮಾಡಿದ್ದರೆ ಏನೆಲ್ಲ ಮಾಡುತ್ತಿದ್ದಿರಿ? ಏನೇನು ಗೂಬೆ ಕೂರಿಸುತ್ತಿದ್ದಿರಿ ಎಂದು ಕೇಳಿದರು.

ಹೆಣ್ಮಕ್ಕಳಿಗೆ ಈ ಸರಕಾರ ರಕ್ಷಣೆ ಕೊಡುತ್ತಿಲ್ಲ; ಎಷ್ಟು ಅತ್ಯಾಚಾರ ಆಗಿವೆ? ಎಷ್ಟು ಮಹಿಳೆಯರು ಪ್ರಾಣತ್ಯಾಗ ಮಾಡಿದ್ದಾರೆ? ಎಷ್ಟು ಬಾಣಂತಿಯರು ಇವತ್ತು ಜೀವ ಕಳಕೊಂಡಿದ್ದಾರೆ? ಎಂದ ಅವರು, ಕಾಂಗ್ರೆಸ್ಸಿಗರು ಅಧಿಕಾರ ಹಂಚಿಕೆಯಲ್ಲಿ ಇದ್ದಾರೆಯೇ ಹೊರತು ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಒಂದು ಕಾಸಿನ ಅಭಿವೃದ್ಧಿ ಇಲ್ಲ; ಅಭಿವೃದ್ಧಿಗೆ ಹಣವೂ ಇಲ್ಲ..

ರಾಜ್ಯದಲ್ಲಿ ಒಂದು ಕಾಸಿನ ಅಭಿವೃದ್ಧಿ ಇಲ್ಲ; ಅಭಿವೃದ್ಧಿಗೆ ಹಣವೂ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಇಡೀ ರಾಜ್ಯದ ಲೂಟಿ ಮಾಡುತ್ತಿರುವಂತಿದೆ. ಎಲ್ಲದರ ಬೆಲೆ ಏರಿಸುತ್ತಿದ್ದಾರೆ. ಇಷ್ಟಾದರೂ ಅವರ ದರಿದ್ರ ತಪ್ಪಿಲ್ಲ. ಇದೊಂದು ದರಿದ್ರ ಸರಕಾರ ಎಂದು ಜನರೇ ಹೇಳುತ್ತಿದ್ದಾರೆ ಎಂದು ದೂರಿದರು.
ಮಂತ್ರಿಗಳು, ಶಾಸಕರು ಸೇರಿ ಪುಂಡಾಟಿಕೆಯಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಆಗದುದನ್ನು ಮರೆಮಾಚಲು, ಗುಂಪುಗಾರಿಕೆ, ಅಧಿಕಾರ ದಾಹ, ಒಳಜಗಳ ಮರೆಮಾಚುವ ಉದ್ದೇಶದಿಂದ ಚರಿತ್ರೆ ತಿದ್ದುವ ಕೆಲಸ ನಡೆದಿದೆ. ರಾಮಾಯಣ, ವಾಲ್ಮೀಕಿ, ಕುಂಭಮೇಳ ಕುರಿತು ಮಾತನಾಡುತ್ತಿದ್ದು, ನಾಲಿಗೆ ಹೊಲಸು ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಒಂದು ದಿನ ಮಾತ್ರೆ, ಇಂಜೆಕ್ಷನ್ ಕೊಡದ ಮಹದೇವಪ್ಪ ಅವರೇನೋ ಡಾಕ್ಟರೇ ಆಗಿದ್ದಾರೆ. ಇತರರೂ ಪಿಎಚ್‍ಡಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಡಾಕ್ಟರ್ ಪ್ರಿಯಾಂಕ್ ಖರ್ಗೆ ಪಿಎಚ್‍ಡಿ ಮಾಡಿದ್ದಾರಾ? ಅವರ ಶಿಕ್ಷಣ ಎಲ್ಲರಿಗೂ ಗೊತ್ತಾಗಿದೆ. ವಾಲ್ಮೀಕಿ ರಾಮಾಯಣದ ಬಗ್ಗೆಯೂ ಹೇಳಿದ್ದಾರೆ. ಆ ರಾಮಾಯಣ ಬೇರೆಯಂತೆ; ಈ ರಾಮಾಯಣ ಬೇರೆ ಅಂತೆ. ಹನುಮಾನ್ ಚಾಲೀಸ ಗೊತ್ತಾ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ; ಅವರ ಕಚೇರಿ ಮುಂದೆ ಜನರು ವಿಷ ತೆಗೆದುಕೊಳ್ಳಲು ಹೋಗಿದ್ದರು. 400 ಕೋಟಿ ಬಾಕಿ ಸಂಬಂಧ ವೆಂಡರ್ಸ್ ಅಸೋಸಿಯೇಶನ್‍ನವರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ದುಡ್ಡು ಕೊಡುವುದು ಬಿಟ್ಟು ಇವರು ರಾಮಾಯಣ ಕಲಿಸಲು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮ ಬರಿದು ಮಾಡಿದ್ದಾರೆ. ನಾಲಿಗೆ ಬರುವಷ್ಟು ಆಚೆಗೆ ಹಾಕಿ ನೆಕ್ಕಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಹೆಸರು ಹೇಳಲು ನಿಮಗೆ ಯೋಗ್ಯತೆ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಹಣ ದೋಚಿದ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು.
ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇ ಎಂದು ಕೇಳಿದ್ದನ್ನೂ ಅವರು ಆಕ್ಷೇಪಿಸಿದರು. ಹಿಂದುತ್ವದಲ್ಲಿ ನಂಬಿಕೆ ಇಲ್ಲದ ನೀವು ಯಾಕೆ ರಾಮಾಯಣ, ಮಹಾಭಾರತದ ಬಗ್ಗೆ ಮಾತನಾಡುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಓಲೈಕೆ ಕಾರಣದಿಂದ ರಾಜ್ಯಕ್ಕೇ ಬೆಂಕಿ ಬೀಳುತ್ತಿದೆಯಲ್ಲವೇ?
ಗಾಡ್, ಗಾಡ್ಸ್ ಗ್ರೇಸ್, ಗಾಡ್ ಬ್ಲೆಸ್ ಯು ಎಂದು ಕೆಲವು ನಾಯಕರ ದೇಹದ ಮೇಲೆ ಬರೆದುದನ್ನು ಪ್ರತಿಭಟಿಸಿ ಸುಮಾರು 800 ಜನರು ಮೈಸೂರಿನಲ್ಲಿ ಪೊಲೀಸ್ ಸ್ಟೇಶನ್‍ಗೆ ನುಗ್ಗಿ ಡಿಸಿಪಿ ವ್ಯಾನ್‍ಗೆ ಬೆಂಕಿ ಹಚ್ಚಿದ್ದಾರೆ. ಸರಕಾರ ಬದುಕಿದೆಯೇ? ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಇದೆ ಎಂದು ಒಪ್ಪಿಕೊಳ್ಳಬೇಕೇ ಎಂದು ಪ್ರಶ್ನೆ ಮಾಡಿದರು. ಕೆಜಿ ಹಳ್ಳಿ ಘಟನೆಯಲ್ಲಿ ಹತ್ತಾರು ವಾಹನ ಸುಟ್ಟು ಪೊಲೀಸ್ ಸ್ಟೇಶನ್‍ಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಆದರೆ ನೀವು ಅನೇಕರನ್ನು ಕೇಸಿನಿಂದ ಬಿಡಲು ಮುಂದಾದಿರಿ ಎಂದು ಟೀಕಿಸಿದರು.

ಹುಬ್ಬಳ್ಳಿಯಲ್ಲೂ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಕೇಸು ವಾಪಸ್ ಪಡೆಯಲಾಯಿತು. ಈ ಓಲೈಕೆ ಕಾರಣದಿಂದ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆಯಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ನಾಯಕತ್ವ, ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳು ಇದಕ್ಕೆ ಕಾರಣವಲ್ಲವೇ ಎಂದು ಪ್ರಶ್ನಿಸಿದರು. ನಿಮ್ಮ ಓಲೈಕೆ ರಾಜ್ಯದ ಜನರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಬಸ್ ಪ್ರಯಾಣದರ, ಮೆಟ್ರೋ ಪ್ರಯಾಣದರ ಹೆಚ್ಚಳವನ್ನೂ ಅವರು ಖಂಡಿಸಿದರು. ರಾಜ್ಯ ಸರಕಾರವು ಬರಿಯ ಸುಳ್ಳು ಹೇಳುತ್ತಿದೆ. ಜನರ ಪೂರ್ತಿ ತಲೆ ಬೋಳಿಸಿದ್ದೀರಿ. ಇನ್ನೇನು ಬೋಳಿಸಲು ಹೊರಟಿದ್ದೀರಿ ಎಂದು ಕೇಳಿದರು.

ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

MahakumbhMela 2025: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಅಂಬಾನಿಯ ನಾಲ್ಕು ತಲೆಮಾರು