ಬೆಂಗಳೂರು: ವಿವಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ತರಗುಪೇಟೆಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ಎಚ್ಚೆತ್ತಿರುವ ಪೊಲೀಸರು, ಜನನಿಬಿಡ ಪ್ರದೇಶವಾದ ತರಗುಪೇಟೆ ಸೇರಿ ಸುತ್ತಮುತ್ತಲಿನಲ್ಲಿರುವ ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಗೋದಾಮಿಗೆ ಮಾಲೀಕರು ಪರವಾನಿಗೆ ಪಡೆದುಕೊಂಡಿದ್ದಾರಾ? ದಾಸ್ತಾನಿನಲ್ಲಿ ಅಕ್ರಮವಾಗಿ ಏನಾದರೂ ಸ್ಫೋಟಕ ಇಡಲಾಗಿದೆಯಾ ಎಂಬುದರ ಬಗ್ಗೆ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಬಾಲಾಜಿ ಕಾಫಿ ಟ್ರೇಡಿಂಗ್ ಕಂಪನಿ ಮೇಲೆ ದಾಳಿಸಿದಾಗ ಮೇಲ್ನೋಟಕ್ಕೆ ಅಕ್ರಮವಾಗಿ ಇರಿಸಲಾಗಿದ್ದ 40 ಕೆಜಿ ತೂಕದ 16 ಗ್ಯಾಸ್ ಸಿಲಿಂಡರ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಪಟಾಕಿಯಿಂದಲೇ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಪರಿಶೀಲನೆ ವೇಳೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ನಿಜಕ್ಕೂ ಪಟಾಕಿ ಸಿಡಿತದಿಂದ ಈ ಪರಿ ಪರಿಣಾಮವಾಗುತ್ತಾ ಎಂಬುದರ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಗೋದಾಮಿನಲ್ಲಿ ಪಟಾಕಿ ಜತೆ ಬೇರೆ ರಾಸಾಯನಿಕ ವಸ್ತುಗಳನ್ನು ಇಟ್ಟಿರಬಹುದು. ಪಟಾಕಿಯಿಂದ ಈ ಪರಿ ಅವಘಡ ಸಂಭವಿಸುವುದಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಬಗ್ಗೆ ನಿಖರ ಕಾರಣ ತಿಳಿಯಲು ಎಫ್ಎಸ್ಎಲ್ ವರದಿ ಬಂದ ನಂತರವಷ್ಟೇ ಗೊತ್ತಾಗಬೇಕಿದೆ.