ಹುಬ್ಬಳ್ಳಿ: ಈರುಳ್ಳಿ ಶುಚಿಗೊಳಿಸುತ್ತಿದ್ದ ವೇಳೆ ತಾಯಿ ಹಾಗೂ ಮಗಳಿಗೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ತಾಯಿ ಮಹಾದೇವಿ ಮಲ್ಲಪ್ಪ ಹಸಬಿ(40) ಹಾಗೂ ಮಗಳು ನಾಗಮ್ಮ ಹಸಬಿ (17) ಎಂಬಾತರೇ ಮೃತಪಟ್ಟ ದುರ್ದೈವಿಗಳು. ಮಲ್ಲಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಅದನ್ನು ಕಿತ್ತು ತಂದು ಮನೆಯ ಹೊರ ಆವರಣದಲ್ಲಿ ರಾಶಿಹಾಕಲಾಗಿತ್ತು. ಮನೆಮಂದಿ ಸೇರಿ ಈರುಳ್ಳಿಯನ್ನು ಶುಚಿಗೊಳಿಸುತ್ತಿದ್ದರು. ಸಂದರ್ಭದಲ್ಲಿ ರಾಶಿಯಲ್ಲಿದ್ದ ನಾಗರ ಹಾವೊಂದು ಮೊದಲು ಮಹಾದೇವಿ ಕೈಗೆ ಕಚ್ಚಿದೆ. ಅದೇನೆಂದು ಅಷ್ಟಾಗಿ ಗಮನಿಸದ ಮಹಾದೇವಿ ಇರುವೆ ಕಚ್ಚಿರಬೇಕೆಂದು ನಿರ್ಲಕ್ಷಿಸಿ ಸುಮ್ಮನಾಗಿದ್ದಳು. ಅದಾದ ಕೆಲವೇ ನಿಮಿಷದ ನಂತರ ಅದೇ ಹಾವು ಈರುಳ್ಳಿ ರಾಶಿಯಿಂದ ಹೆಡೆಯೆತ್ತಿ ಮಗಳು ನಾಗಮ್ಮಳಿಗೆ ಕಚ್ಚಿದೆ.
ಅವರ ಜೊತೆಯಲ್ಲಿಯೇ ಈರುಳ್ಳಿ ಶುಚಿಗೊಳಿಸುತ್ತಿದ್ದ ಉಳಿದವರು ಈ ದೃಶ್ಯ ನೋಡಿ ಹೌಹಾರಿದ್ದಾರೆ. ಮಗಳಿಗೆ ಹಾವು ಕಚ್ಚಿದ ಅರೆಕ್ಷಣದಲ್ಲಿಯೇ ತಾಯಿ ಮಹಾದೇವಿ ಕೂತಲಿಂದಲೇ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಮಗಳು ನಾಗಮ್ಮಳಿಗೆ ಹಾವು ಕಚ್ಚಿದೆ ಎಂದು ಕೂಡಲೇ ಅಂಬುನ್ಸ್ ಗೆ ಕರೆಸಿ ಚಿಕಿತ್ಸೆಗಾಗಿ ಕಿಮ್ಸ್ ಗೆ ಕರೆದೊಯ್ಯಲಾಗಿತ್ತು.
ಮಗಳಿಗೆ ಹಾವು ಕಚ್ಚಿದ್ದನ್ನು ನೋಡಿ ತಾಯಿ ಗಾಬರಿಯಿಂದ ತಲೆ ಸುತ್ತಿ ಕುಸಿದು ಬಿದ್ದಿರಬೇಕೆಂದು ತಿಳಿದು ಅವಳನ್ನು ಅಲ್ಲಿಯೇ ಬಿಟ್ಟು ತುಸು ಆರೈಕೆ ಮಾಡಿದ್ದಾರೆ. ಮಗಳನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಇತ್ತ ಮಹಾದೇವಿಯ ಬಾಯಿಯಿಂದ ನೊರೆ ಬರುತ್ತಿರುವುದನ್ನು ಕಂಡು ಕರೆ ಮಾಡಿ ಹೇಳಿದ್ದಾರೆ. ಅಷ್ಟರಲ್ಲಾಗಲೇ ಆಕೆಯ ಕೈ ಹಸಿರು ಗಟ್ಟಿ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಆದರೂ ಆಸ್ಪತ್ರೆಗೆಂದು ಕರೆದೊಯ್ಯುತ್ತಿರುವಾಗ ದಾರಿ ಮಧ್ಯೆಯೇ ಅಸುನೀಗಿದ್ದಾರೆ. ನಂತರ ನಾಗಮ್ಮ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾಳೆ. ಸಂಬಂಧಿಸಿ ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ