Publish Date: Mon, 31 Oct 2016 (17:37 IST)
Updated Date: Mon, 31 Oct 2016 (17:40 IST)
ಹೂತಿದ್ದ ಶವದ ತಲೆಬುರುಡೆ ಮತ್ತು ಎರಡೂ ಕೈಗಳ ಮೂಳೆಯನ್ನು ಕಳವು ಮಾಡಿರುವ ಹೇಯ ಘಟನೆ ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಶನಿವಾರ- ಭಾನುವಾರದ ನಡುವಿನ ರಾತ್ರಿ ನಡೆದಿದೆ.
ಗ್ರಾಮದ ನಿವಾಸಿ ವಿರೂಪಾಕ್ಷಪ್ಪ ಕಳೆದ ಏಳು ತಿಂಗಳ ಹಿಂದೆ ಸಾವನ್ನಪ್ಪಿದ್ದು, ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಅವರನ್ನು ಹೂಳಲಾಗಿತ್ತು. ಶನಿವಾರ ಅಮಾವಾಸ್ಯೆ ಹಿಂದಿನ ರಾತ್ರಿ ಅವರ ಶವವನ್ನು ಅಗೆದ ದುಷ್ಕರ್ಮಿಗಳು ತಲೆಬುರುಡೆ ಮತ್ತು ಮೂಳೆಯನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ನಿನ್ನೆ ಅಮವಾಸ್ಯೆ ನಿಮಿತ್ತ ಅವರ ಪರಿವಾರದ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಲು ಹೋದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದರಿಂದ ಗಾಬರಿಯಾದ ಅವರು ಮಾಟ-ಮಂತ್ರದ ಶಂಕೆ ವ್ಯಕ್ತ ಪಡಿಸಿ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಕೃತ್ಯ ಹಬ್ಬದ ಕಳೆ ಕಟ್ಟಿದ್ದ ಗ್ರಾಮವನ್ನು ಆತಂಕಕ್ಕೆ ದೂಡಿದೆ.