ಹುಬ್ಬಳ್ಳಿ : ಜಿ20 ಸಭೆಗೆ ನನ್ನನ್ನು ಕರೆದಿಲ್ಲ. ಔತಣಕೂಟಕ್ಕೆ ಕರೆದಿದ್ದಾರೆ. ನನಗೆ ಬೇರೆ ಕೆಲಸ ಇರುವುದರಿಂದ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ನಾನು ಹೋಗುವುದಿಲ್ಲ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ನೇರವಾಗಿ ಪ್ರಧಾನಿಯಾದರು. ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು. ಸುಮ್ಮನೆ ಅವರನ್ನು ಟೀಕೆ ಮಾಡುವುದಿಲ್ಲ. ಇರುವ ಸಮಸ್ಯೆಗಳ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ಜೆಡಿಎಸ್ , ಬಿಜೆಪಿಯ ಬಿ ಟೀಮ್ ಎಂಬುದು ಈಗ ಸಾಬೀತಾಗಿದೆ. ಮೊದಲು ಬಿ ಟೀಮ್ ಎಂದರೆ ಕೋಪ ಮಾಡಿಕೊಳ್ಳುತ್ತಿದ್ದರು. ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಸೇರಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ದೇವೇಗೌಡರು ಯಾವ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ ಎಂದಿದ್ದರು. ಆದರೆ ಜಿ.ಟಿ ದೇವೇಗೌಡ ಪಕ್ಷದ ಉಳಿವಿಗೆ ಸೇರಿದ್ದೇವೆ ಎನ್ನುತ್ತಾರೆ. ಇವರಿಗೆ ಯಾವ ಸಿದ್ಧಾಂತವೂ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.