Select Your Language

Notifications

webdunia
webdunia
webdunia
webdunia

ಮಹಿಳಾ ದೌರ್ಜನ್ಯ; ಸರ್ಕಾರದ ನಡೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ!

ಮಹಿಳಾ ದೌರ್ಜನ್ಯ; ಸರ್ಕಾರದ ನಡೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ!
ಬೆಂಗಳೂರು , ಮಂಗಳವಾರ, 7 ಸೆಪ್ಟಂಬರ್ 2021 (12:40 IST)
ಬೆಂಗಳೂರು, (ಸೆ. 07): "ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಆದರೆ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಆರ್ಥಿಕ ಕೊರತೆಯ ನೆಪವೊಡ್ಡಿ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಟಿರುವುದು ರಾಜ್ಯ ಸರ್ಕಾರದ ಮಹಿಳಾ ವಿರೋಧಿ ಕ್ರಮವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕೈಗೊಂಡಿರುವ ತೀರ್ಮಾನ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ನೊಂದ ಮತ್ತು ತುರ್ತು ಅಗತ್ಯ ಇರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿದಂತೆ ಹಲವು ರೀತಿಯ ಸಹಾಯ ಒಂದೇ ಸೂರಿನ ಅಡಿಯಲ್ಲಿ ಸಿಗಬೇಕು ಎನ್ನುವ ಕಾಳಜಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲಾಗುತಿತ್ತು.
ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಸಾಂತ್ವನ ಕೇಂದ್ರಗಳ ಆಪ್ತ ಸಮಾಲೋಚಕರಿಂದ ಇದುವರೆಗೂ ಸಹಸ್ರಾರು ಮಹಿಳೆಯರು ಸಾಂತ್ವನ ಮತ್ತು ಭರವಸೆ ಪಡೆದುಕೊಂಡಿದ್ದಾರೆ. ಈ ಕೇಂದ್ರಗಳು ನೊಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಆತ್ಮಹತ್ಯೆ, ಖಿನ್ನತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದವು.
ಈಗ ಕೋವಿಡ್ ನೆಪದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣ ಹೇಳಿ 71 ಸಾಂತ್ವನ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜಧಾನಿ ಬೆಂಗಳೂರು ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೀಗಿದ್ದೂ ಬೆಂಗಳೂರು ನಗರದಲ್ಲಿದ್ದ ಎಲ್ಲಾ ಸಾಂತ್ವನ ಕೇಂದ್ರಗಳನ್ನು ಬಂದ್ ಮಾಡಿರುವುದು ಅಕ್ಷಮ್ಯ.
ಹೀಗಾಗಿ ತಕ್ಷಣ ಬಂದ್ ಆಗಿರುವ ಸಾಂತ್ವನ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು. ಉಳಿದ ಕೇಂದ್ರಗಳನ್ನು ಬಂದ್ ಮಾಡುವ ನಿರ್ಧಾರವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ದುರುದ್ದೇಶದ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ