ಬೆಂಗಳೂರು: ಮೇ ಮೊದಲ ವಾರದಲ್ಲೇ ಮಳೆ ಬಂದು ತಂಪಾಗಿದ್ದ ರಾಜ್ಯ ರಾಜಧಾನಿ
ಬೆಂಗಳೂರಿನಲ್ಲಿ ಇದೀಗ ಕಳೆದ ಹತ್ತು ದಿನಗಳಿಂದ ಮಳೆಯಿಲ್ಲ. ಮಳೆಯಿಲ್ಲದೇ ಮತ್ತೆ ತಾಪಮಾನ ಏರಿಕೆಯಾಗುತ್ತಿದೆ.
ಈ ಬಾರಿ ಬೆಂಗಳೂರಿನಲ್ಲಿ ತಾಪಮಾನ ದಾಖಲೆಯಮಟ್ಟಕ್ಕೇರಿತ್ತು. ಏಪ್ರಿಲ್ ಕೊನೆಯ ವಾರದಲ್ಲಿ ದಾಖಲೆಯ 40 ಡಿಗ್ರಿ ತಲುಪಿತ್ತು. ಕೂಲ್ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ಇತ್ತೀಚೆಗಿನ ದಿನಗಳಲ್ಲಿ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿತ್ತು.
ಆದರೆ ಮೇ ಮೊದಲ ವಾರದಲ್ಲಿ ಮಳೆ ಬಂದಿದ್ದರಿಂದ ವಾತಾವರಣ ಕೊಂಚ ತಂಪಾಗಿತ್ತು. ಆದರೆ ಈಗ ಮಳೆಯಿಲ್ಲದೇ 10 ದಿನಗಳಾಗಿವೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೆ ತಾಪಮಾನ ಏರಿಕೆಯಾಗಿದ್ದು, ಸೆಖೆ, ಉರಿಬಿಸಿಲಿನ ವಾತಾವರಣ ಕಂಡುಬರುತ್ತಿದೆ.
ಇಂದು ಬೆಂಗಳೂರಿನಲ್ಲಿ ಸರಾಸರಿ ತಾಪಮಾನ 30 ಡಿಗ್ರಿಗಿಂತಲೂ ಅಧಿಕವಿದೆ. ಕಳೆದ ಒಂದು ವಾರದಿಂದ ಮಳೆಯೇ ಇಲ್ಲ. ಮುಂದಿನ ವಾರ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಜೂನ್ 2 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಹೀಗಾದಲ್ಲಿ ರಾಜ್ಯದಕ್ಕೆ ಎರಡು ದಿನ ತಡವಾಗಿ ಮುಂಗಾರು ಪ್ರವೇಶವಾಗಬಹುದು. ಹೀಗಾಗಿ ಸೆಖೆಯಿಂದ ಕಂಗಾಲಾಗಿರುವ ಬೆಂಗಳೂರಿಗೆ ಮತ್ತೆ ಮುಂದಿನ ವಾರ ವರುಣ ತಂಪೆರಚುವ ನಿರೀಕ್ಷೆಯಿದೆ.