Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೊ ಸಂಚಾರ ಜಾಲ: ತೇಜಸ್ವಿ ಸೂರ್ಯ

Tejasvi Surya

Krishnaveni K

ಬೆಂಗಳೂರು , ಗುರುವಾರ, 7 ಆಗಸ್ಟ್ 2025 (16:39 IST)
ಬೆಂಗಳೂರು: ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಸುಮಾರು 100 ಕಿಮೀ ತಲುಪಲು ಅದಕ್ಕೆ ನರೇಂದ್ರ ಮೋದಿಯವರ ಸರಕಾರ ಮತ್ತು ಪ್ರಧಾನಿಯವರು ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಕೊಟ್ಟ ಆದ್ಯತೆಯೇ ಕಾರಣ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿ.ವೈ.ವಿಜಯೇಂದ್ರ ಅವರು ಪ್ರಧಾನಿಯವರ ಭೇಟಿ ಕುರಿತಂತೆ ಮಾಹಿತಿ ಕೊಟ್ಟರು.
 
ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ ಅವರು, 2014ರಲ್ಲಿ ಮೋದಿಯವರು ಪ್ರಧಾನಿ ಆಗುವುದಕ್ಕೆ ಮೊದಲು ಬೆಂಗಳೂರಿನ ಮೆಟ್ರೊ ಕನೆಕ್ಟಿವಿಟಿ ಇದ್ದುದು ಸುಮಾರು 7.5 ಕಿಮೀ. ಆ. 10ರಂದು ಯೆಲ್ಲೋ ಲೈನ್ ಉದ್ಘಾಟನೆಯ ನಂತರ ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಸುಮಾರು 100 ಕಿಮೀ ತಲುಪಲಿದೆ. ದೆಹಲಿ ನಂತರ ಅತಿ ಹೆಚ್ಚು ಕನೆಕ್ಟಿವಿಟಿ ಇರುವ, ವಿಸ್ತರಣೆ ಆಗುತ್ತಿರುವ ಮೆಟ್ರೊ ಇದು ಎಂದು ವಿವರ ನೀಡಿದರು.
 
ಪ್ರಧಾನಿಯವರನ್ನು ಯಾರು ಕರೆಸಿದರು ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಬೆಂಗಳೂರಿನ ಮೆಟ್ರೊ ಆದಷ್ಟು ಬೇಗ ಉದ್ಘಾಟನೆ ಆಗಬೇಕು; ವಿಳಂಬ ಸಲ್ಲದೆಂದು ಪ್ರಧಾನಿಯವರು ದಿನಾಂಕ ನಿಗದಿಪಡಿಸಿ ಬರುತ್ತಿದ್ದಾರೆ. ಅವರು ಕರ್ನಾಟಕ, ದೆಹಲಿ ಮಾತ್ರವಲ್ಲ ಭಾರತದ ಪ್ರಧಾನಿ. ಅವರ ಆಗಮಿಸುವಿಕೆಯನ್ನು ರಾಜ್ಯ ಸರಕಾರ, ಬಿಜೆಪಿ, ಇಲ್ಲಿನ ಜನತೆ ಉತ್ಸಾಹ- ಹಬ್ಬದಂತೆ ಸ್ವಾಗತಿಸಲು ಸಜ್ಜಾಗಬೇಕಿದೆ. ಅಂತೆಯೇ ಅವರ ಸ್ವಾಗತ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದಾರೆ ಎಂದು ತಿಳಿಸಿದರು.
 
ಯೆಲ್ಲೋ ಲೈನಿನ ಮೆಟ್ರೊ ಬಗ್ಗೆ ಸಿಎಂ, ಡಿಸಿಎಂ ತಲೆ ಕೆಡಿಸಿಕೊಂಡಿಲ್ಲ
ರಾಜ್ಯ ಸರಕಾರ ಅದರಲ್ಲೂ ವಿಶೇಷವಾಗಿ ಉಪ ಮುಖ್ಯಮಂತ್ರಿಗಳು ನಿನ್ನೆ ಯೆಲ್ಲೋ ಲೈನಿನ ಮೆಟ್ರೊದಲ್ಲಿ ಓಡಾಡಿದರು. ಇದು ಶೇ 50-50ರ ಯೋಜನೆ. ನಮ್ಮದೂ ದೊಡ್ಡ ಕೊಡುಗೆ ಇದೆ ಎಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಯೆಲ್ಲೋ ಲೈನಿನ ಮೆಟ್ರೊ ಬಗ್ಗೆ ಒಂದು ದಿನವೂ ತಲೆ ಕೆಡಿಸಿಕೊಂಡಿಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.

10ರಂದು ಪ್ರಧಾನಿಯವರು ಉದ್ಘಾಟಿಸಲು ಆಗಮಿಸುತ್ತಾರೆ ಎಂದ ತಕ್ಷಣ, ನಿನ್ನೆ ಪ್ರಚಾರ ಗಿಟ್ಟಿಸಿಕೊಳ್ಳಲು ಟೂರ್ ಹೊಡೆಯಲು ಶುರು ಮಾಡಿದ್ದಾರೆ. ಈ ಮೆಟ್ರೊ ಲೈನಿನ ಕೆಲಸ 2018ರಲ್ಲಿ ಆರಂಭವಾಗಿತ್ತು. 2021ಕ್ಕೆ ಇದು ಪೂರ್ಣಗೊಳ್ಳಬೇಕಿತ್ತು. ಕೋವಿಡ್‍ನಿಂದ ಕೆಲವು ಸಮಸ್ಯೆಗಳಾದವು. ಭೂಮಿ ಸ್ವಾಧೀನದಲ್ಲೂ ಕೆಲವು ಸಮಸ್ಯೆಗಳಾದವು. ಆಗ ಕಾಂಗ್ರೆಸ್ಸಿನವರು, ಇನ್ನೊಬ್ಬರಾಗಲೀ ಸಹಾಯಕ್ಕೆ ಬರಲಿಲ್ಲ ಎಂದು ಟೀಕಿಸಿದರು.
 
ಪೂರ್ಣಾವಧಿ ಎಂ.ಡಿ. ನೇಮಕ ಮಾಡಿರಲಿಲ್ಲ
ಕೋವಿಡ್ ಅವಧಿಯಲ್ಲಿ ಯಡಿಯೂರಪ್ಪ ಅವರ ಸರಕಾರವಿತ್ತು. ಕೋವಿಡ್ ಮಧ್ಯದಲ್ಲೂ ಸಿವಿಲ್ ಕೆಲಸಗಳು ನಮ್ಮ ಸರಕಾರದ ಅವಧಿಯಲ್ಲಿ ನಡೆಯಿತು. ಕಾರ್ಮಿಕರನ್ನು ಕರೆಸಲು ಸಮಸ್ಯೆ ಆಗಿದ್ದು, ನಾವು ಆಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದರು. ಹೆಚ್ಚು ಕೆಲಸವೂ ಆಗಿತ್ತು. ಬಳಿಕ ಬೊಮ್ಮಾಯಿಯವರ ಅವಧಿಯಲ್ಲಿ ಶೇ 95 ಸಿವಿಲ್ ಕಾಮಗಾರಿ ನಾವೇ ಪೂರ್ಣಗೊಳಿಸಿದ್ದೆವು. ಇವರ ಸರಕಾರವೇ ಇರಲಿಲ್ಲ; ಇವರ ಸರಕಾರವು ಬಿಎಂಆರ್‍ಸಿಎಲ್‍ಗೆ ಒಬ್ಬ ಪೂರ್ಣಾವಧಿ ಎಂ.ಡಿ. ನೇಮಕಕ್ಕೆ ಮುಂದಾಗಲಿಲ್ಲ ಎಂದು ದೂರಿದರು.
ಕಳೆದ ವರ್ಷ ಜನವರಿಯಲ್ಲಿ 3 ತಿಂಗಳ ಹೋರಾಟದ ಬಳಿಕ ರಾಜ್ಯ ಸರಕಾರವು ಮೊದಲ ಬಾರಿ ಪೂರ್ಣಾವಧಿ ಎಂ.ಡಿ. ಯನ್ನು ಬೆಂಗಳೂರು ಮೆಟ್ರೊಗೆ ನೇಮಕ ಮಾಡಿತು. ಕೋಚ್ ಉತ್ಪಾದನಾ ಪ್ರದೇಶಕ್ಕೆ ನಾನು 3 ಬಾರಿ ಹೋಗಿ ಬಂದಿದ್ದೇನೆ. ಪೂರ್ಣಾವಧಿ ಎಂ.ಡಿ. ಇಲ್ಲದ ಕಾರಣ ಎಂ.ಡಿ. ಬಂದಿರಲಿಲ್ಲ. ರಾಜ್ಯ ಸರಕಾರ ನಿನ್ನೆ ಸಬರ್ಬನ್ ರೈಲಿಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಿಸಿದೆ. ಅವರಿಗೆ ಇನ್ನೊಂದು ಇಲಾಖೆಯ ಪ್ರಭಾರ ಹುದ್ದೆ ಕೊಟ್ಟಿದೆ. ಸಬರ್ಬನ್ ರೈಲಿನ 4 ಕಾರಿಡಾರ್ ಕೆಲಸ ಇವತ್ತು ನಿಂತಿದೆ ಎಂದು ಆಕ್ಷೇಪಿಸಿದರು.
 
ವೀಸಾ ಸಮಸ್ಯೆ ಬಗ್ಗೆಯೂ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮಾತನಾಡಿಲ್ಲ; ಟ್ವೀಟ್ ಮಾಡಿಲ್ಲ. ಕೇಂದ್ರದ ಸಚಿವರ ಜೊತೆಗೆ ಮಾತನಾಡಿಲ್ಲ. ಆರ್‍ಸಿಬಿ ಕ್ರಿಕೆಟ್ ಮ್ಯಾಚ್ ಗೆದ್ದಾಗ ಇವರೇ ಏನೋ ಸಿಕ್ಸರ್, ಫೋರ್ ಹೊಡೆದ ರೀತಿ ರಾಜ್ಯ ಸರಕಾರವು ಪೋಸ್ ಕೊಟ್ಟಿತ್ತು ಎಂದು ತೇಜಸ್ವಿ ಸೂರ್ಯ ಟೀಕಿಸಿದರು.
 
6 ಬಾರಿ ಕಾಗೆ ಹಾರಿಸಿದರು
ಕ್ರಿಕೆಟ್ ಪಂದ್ಯದ ಅಷ್ಟೊಂದು ಕ್ರೆಡಿಟ್ ತೆಗೆದುಕೊಳ್ಳಲು ನಿಂತವರು ಇನ್ನು ಮೆಟ್ರೊದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬರದೇ ಇರುತ್ತಾರಾ ಎಂದು ಕೇಳಿದರು. ಭೂಸ್ವಾಧೀನ, ವೀಸಾ ಸಮಸ್ಯೆಗಳು ಇದ್ದಾಗ ನೀವೆಲ್ಲಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದರು. ಉದ್ಘಾಟನೆಗೆ ಇನ್ನು 15 ದಿನ, ಇನ್ನು ಒಂದು ತಿಂಗಳು ಎಂದು 6 ಬಾರಿ ಕಾಗೆ ಹಾರಿಸಿದ್ದಾರೆ. ಮೊನ್ನೆ ನಾವೆಲ್ಲರೂ ಯೆಲ್ಲೋ ಲೈನಿನ ಪ್ರದೇಶದ 7 ಶಾಸಕರು, ಇಬ್ಬರು ಸಂಸದರು, ನಮ್ಮ ಜಿಲ್ಲಾಧ್ಯಕ್ಷರು, ನೂರಾರು ಜನ ಸಾರ್ವಜನಿಕರು ಸೇರಿ ಪ್ರಯತ್ನ ಮಾಡಿ ಹೋರಾಟ ಮಾಡಿ ಗಲಾಟೆ ಮಾಡಿದಾಗ ಆಗಸ್ಟ್ 15ರೊಳಗೆ ಮಾಡುತ್ತೇವೆ ಎಂದಿದ್ದರು ಎಂದು ವಿವರಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಮಹದೇವಪುರ ಕ್ಷೇತ್ರದಲ್ಲಿ ಎಷ್ಟು ನಕಲಿ ಮತದಾರರಿದ್ದರು: ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ