Publish Date: Wed, 24 May 2023 (13:50 IST)
Updated Date: Wed, 24 May 2023 (12:52 IST)
ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದ ನಟಿ, ಸಂಸದೆ ಸುಮಲತಾ ಅಂಬರೀಶ್, ಆ ಚುನಾವಣೆಯ ಫಲಿತಾಂಶವನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪುಟಿದೇಳುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರಿಗೂ ಅವರು ಬಿಸಿ ಮುಟ್ಟಿಸಿದ್ದಾರೆ. ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ನಲ್ಲಿ ಬರೆದದ್ದು ಹೀಗಿದೆ.
ತಮ್ಮೆಲ್ಲರಿಗೂ ಗೊತ್ತಿರುವಂತೆ ನಾನು 10 ಮಾರ್ಚ್ 2023 ರಂದು ಪತ್ರಿಕಾಗೋಷ್ಠಿ ಕರೆದು ಬಿಜೆಪಿಗೆ ನನ್ನ ಬೆಂಬಲವನ್ನು ಘೋಚಿಸಿದ್ದೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಪಕ್ಷವು ಏಪ್ರಿಲ್ 18 ರಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಿತು. ಪಕ್ಷವು ಘೋಷಣೆ ಮಾಡಿದ ನನ್ನ ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ಫಸ್ಟ್ ಟೈಮ್ ಚುನಾವಣೆ ಎದುರಿಸಿದವರು.
ಎದುರಾಳಿಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ್ದಾರೆ. ಅಲ್ಲದೇ ಪ್ರಚಾರಕ್ಕೆ ನಮಗಿದ್ದದ್ದು ಎರಡ್ಮೂರು ವಾರಗಳಷ್ಟೇ ಸಮಯ. ಆದರೂ ಹೊಸ ಪಡೆಯನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದೇವೆ. ಪರಿಣಾಮ ಮೊದಲ ಬಾರಿಗೆ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಮಳವಳ್ಳಿಯಲ್ಲಿ ಬಿಜೆಪಿಗೆ ಮತಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.