ಬೆಂಗಳೂರು: ಮಂಡ್ಯ ಲೋಕಸಭೆ ಟಿಕೆಟ್ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿರುವ ಸುಮಲತಾ ಅಂಬರೀಶ್ ಇಂದು ಪ್ರಮುಖ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ಮೊನ್ನೆಯಷ್ಟೇ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದರು. ಈ ವೇಳೆ ಮಂಡ್ಯ, ಕೋಲಾರ ಮತ್ತು ಹಾಸನ ಟಿಕೆಟ್ ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂದು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮೊದಲು ಸುಮಲತಾ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಂಡ್ಯ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದರು.
ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದರು. ಈ ಬಾರಿ ಸುಮಲತಾ ಬಿಜೆಪಿ ಸೇರಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಜೆಡಿಎಸ್ ಮಂಡ್ಯ ಟಿಕೆಟ್ ಬಿಟ್ಟುಕೊಡಲು ಕೇಳುತ್ತಿರುವುದು ಸುಮಲತಾಗೆ ಕಗ್ಗಂಟಾಗಿದೆ.
ತಾನು ಸ್ಪರ್ಧಿಸಿದರೆ ಮಂಡ್ಯದಿಂದ ಮಾತ್ರ ಎಂದು ಸುಮಲತಾ ಪಟ್ಟು ಹಿಡಿದು ಕುಳಿತಿರುವುದು ಬಿಜೆಪಿಗೆ ತಲೆನೋವಾಗಿದೆ. ಮಂಡ್ಯದಿಂದ ಸ್ಪರ್ಧೆ ಖಚಿತಪಡಿಸಿರುವ ಸುಮಲತಾ ಇಂದು ತಮ್ಮ ನಿವಾಸದಲ್ಲಿ ಪ್ರಮುಖ ಮುಖಂಡರ ಜೊತೆ ಸಭೆ ಕರೆದಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸ್ಥಳೀಯ ಮುಖಂಡರ ಸಹಾಯ ಪಡೆಯಲಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರ ರಣರಂಗವಾಗುವ ಸೂಚನೆ ಸಿಕ್ಕಿದೆ.