Publish Date: Sun, 02 Oct 2022 (14:03 IST)
Updated Date: Sun, 02 Oct 2022 (15:56 IST)
ಯುವತಿಯೊಬ್ಬಳು ಗಣೇಶ ವಿಸರ್ಜನೆಗಾಗಿ ನಿರ್ಮಿಸಿದ್ದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು 4 ಪುಟಗಳ ಸುದೀರ್ಘ ಡೆತ್ನೋಟ್ ಕೂಡ ಬರೆದಿಟ್ಟಿದ್ದಳು. ಇದೀಗ ಆ ಡೆತ್ನೋಟ್ ಮಾಹಿತಿ ಬಹಿರಂಗಗೊಂಡಿದ್ದು, ಯುವತಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ.
ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಸಾರಿಕಾ (16) ಆತ್ಮಹತ್ಯೆ ಮಾಡಿಕೊಂಡವಳು. ನಾಲ್ಕು ಪುಟಗಳ ಡೆತ್ನೋಟ್ ಸಿಕ್ಕಿದ್ದರೂ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ನಿಖರವಾದ ಮಾಹಿತಿ ಅದರಲ್ಲಿ ಉಲ್ಲೇಖವಾಗಿಲ್ಲ. ಆದರೆ ಆಕೆ ಅದರಲ್ಲಿ ವ್ಯಕ್ತಪಡಿಸಿರುವ ಕೊನೆಯ ಆಸೆಯಂತೂ ವಿಚಿತ್ರವಾಗಿದೆ.
ತನ್ನ ಗೆಳೆಯ-ಗೆಳತಿಯರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಈ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ ತನ್ನದೊಂದು ಕೊನೆಯ ಆಸೆಯನ್ನೂ ತಿಳಿಸಿದ್ದಾಳೆ. 'ನನ್ನದು ಒಂದೇ ಆಸೆ, ನನ್ನ ಶವ ನೋಡೋಕೆ ಎಲ್ಲರೂ ಬನ್ನಿ, ಇಲ್ಲಂದ್ರೆ ನಾನು ದೆವ್ವ ಆಗಿ ಬರ್ತೀನಿ ನೋಡಿ' ಎಂಬುದಾಗಿ ತನ್ನ ಡೆತ್ನೋಟ್ನ ಕೊನೆಯಲ್ಲಿ ಬರೆದುಕೊಂಡಿದ್ದಳು. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.