ನವದೆಹಲಿ (ಆಗಸ್ಟ್ 27) : ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾಗಿರುವ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಯಾರೆಯಾಗಿರಲಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸ್ಪಷ್ಟ ಆದೇಶ ನೀಡಿದ್ದೇನೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಆದುದರಿಂದ ಪ್ರಕರಣದ ತನಿಖಾ ವರದಿಯನ್ನು ನೇರವಾಗಿ ತಮಗೆ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನವದೆಹಲಿಯಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, "ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಎಡಿಜಿಪಿ ಪ್ರತಾಪ ರೆಡ್ಡಿ ಹಾಗೂ ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ಜೊತೆ ಮಾತನಾಡಿದ್ಧೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ತಪಿತಸ್ಥರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ನೀಡುವಂತೆ ಸೂಚನೆ ನೀಡಿದ್ದೇನೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ತನಿಖೆ ಚುರುಕಾಗಿ ನಡೆಯುತ್ತಿದೆ" ಎಂದು ಅವರು ತಿಳಿಸಿದರು.
ಗೃಹ ಸಚಿವರ ಹೇಳಿಕೆ ವಿರೋಧಿಸಿದ ಸಿಎಂ;
'ಅತ್ಯಾಚಾರಕ್ಕೆ ಒಳಗಾದ ಯುವತಿ ಅಷ್ಟು ಹೊತ್ತಿನಲ್ಲಿ ಅಲ್ಲಿಗೆ ಹೋಗಬಾರದಿತ್ತು. ಕಾಂಗ್ರೆಸ್ ನಾಯಕರು ನನ್ನನ್ನು ರೇಪ್ ಮಾಡುತ್ತಿದ್ದಾರೆ' ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಗೆ ನನ್ನ ಸಹಮತ ಇಲ್ಲ. ಪ್ರಕರಣದ ಆರೋಪಗಳನ್ನು ಕೂಡಲೇ ಪತ್ತೆ ಹಚ್ಚಬೇಕು. ಅವರಿಗೆ ಕಾನೂನಿನ ಅಡಿ ಸೂಕ್ತ ಶಿಕ್ಷೆ ನೀಡಬೇಕು ಎಂಬುದು ನನ್ನ ನಿಲುವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಳಿದರಲ್ಲದೆ, ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಗೃಹ ಸಚಿವರಿಗೆ ಸೂಚನೆ ನೀಡಿರುವುದಾಗಿಯೂ ತಿಳಿಸಿದರು.
ಪ್ರತಿದಿನ 5 ಲಕ್ಷ ಕೋವಿಡ್ ಲಸಿಕೆ;
ರಾಜ್ಯಕ್ಕೆ ಪ್ರತಿ ದಿನ 5 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈಗ ಪ್ರತಿ ದಿನ 3.5 ಲಕ್ಷದಿಂದ 4 ಲಕ್ಷ ಲಸಿಕೆ ರಾಜ್ಯಕ್ಕೆ ಪೂರೈಕೆ ಆಗುತ್ತಿದೆ. ಸೆಪ್ಟೆಂಬರ್ ತಿಂಗಳಿಂದ ಪ್ರತಿ ದಿನ 5 ಲಕ್ಷ ಲಸಿಕೆ ಹಾಕಲು ರಾಜ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಸಂಗತಿಯನ್ನು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅವರ ಗಮನಕ್ಕೆ ತರಲಾಯಿತು. ರಾಜ್ಯದ ಈ ಪ್ರಸ್ತಾವನೆಗೆ ಅವರು ಒಪ್ಪಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ನೀಡುವ ಭರವಸೆ ನೀಡಿದರು ಎಂದು ಅವರು ಹೇಳಿದರು.
ಕೇಂದ್ರ ಜವಳಿ ಖಾತೆ ಸಚಿವರಾದ ಪಿಯೂಶ್ ಗೋಯಲ್ ಅವರನ್ನು ಇಂದು ಭೇಟಿ ಮಾಡಿದ್ದೆ. ಈ ಸಂದರ್ಭದಲ್ಲಿ ಅವರು ಹೊಸ ಜವಳಿ ನೀತಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಕರ್ನಾಟಕದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದೆ. ದೇಶದಲ್ಲಿಯೇ ಮೊಟ್ಟ ಮೊದಲ ರಾಜ್ಯವಾಗಿ ಕರ್ನಾಟಕ ಅನುಷ್ಠಾನಕ್ಕೆ ತಂದಿದೆ ಎಂದು ಅವರು ಹೇಳಿದರು.