ಹಾವೇರಿ: ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಮನೆ ಖಾಲಿ ಮಾಡಿಸುತ್ತಾರೆಂಬ ಮಾಹಿತಿ ಹರಿದಾಡುತ್ತಿದ್ದ ಹಾಗೇ ಸವಣೂರು ತಾಲ್ಲೂಕಿನ ಕಡಕೋಳದಲ್ಲಿ ಎರಡು ಕೋಮಿನ ಮಧ್ಯೆ ಬುಧವಾರ ಗಲಾಟೆ ನಡೆದು, ಕೆಲಹೊತ್ತು ಪರಿಸ್ಥಿತಿ ಬಿಗಡಾಯಿಸಿತ್ತು.
ಒಂದು ಕೋಮಿನ ಮುಖಂಡರ ಮನೆಗಳ ಮೇಲೆ ಮತ್ತೊಂದು ಕೋಮಿನ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ಮಾಹಿತಿ ಪಡೆದ ಪೊಲೀಸರು ಕಡಕೋಳ ಗ್ರಾಮಕ್ಕೆ ಹೋಗಿ ಜನರನ್ನು ಚದುರಿಸಿದ್ದು, ಬಾಲಕರು ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಅಂಶುಕುಮಾರ್ ತಿಳಿಸಿದರು.
ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ. ಅಲ್ಲದೆ ಮನೆ ಮುಂದಿದ್ದ ಬೈಕ್ ಅನ್ನು ಜಖಂ ಮಾಡಲಾಗಿದೆ. ಮತ್ತೆ ಅಹಿತಕರ ಘಟನೆ ನಡೆಯದಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಗಲಾಟೆಗೆ ಕಾರಣರಾದವರನ್ನು ಬಂಧಿಸಲು ಮುಂದಾದ ಪೊಲೀಸರು, ಗಲಾಟೆಗೆ ಪ್ರಚೋದನೆ ನೀಡಿದರನ್ನೂ ಪತ್ತೆ ಮಾಡಲು ಮುಂದಾಗಿದ್ದಾರೆ.
ಗ್ರಾಮದಲ್ಲಿದ್ದ ಗರಡಿ ಮನೆ ಹಾಗೂ ಹಲವು ಮನೆಗಳ ಖಾತೆ ಬದಲಾವಣೆ ಮಾಡಿ ವಕ್ಫ್ ಆಸ್ತಿ ಎಂಬುದಾಗಿ ಬಗ್ಗೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.