ಬೆಂಗಳೂರು: ವಿಧಾನ ಮಂಡಲ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಸದನದ ಮೊದಲ ದಿನವೇ ಸ್ಪೀಕರ್ ಯುಟಿ ಖಾದರ್ ಕಾರ್ಯನಿರ್ವಹಣೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೊಗಳಿಕೆಗೆ ಫುಲ್ ನಾಚಿಕೊಂಡರು.
ಇಂದು ಸದನದ ಆರಂಭದಲ್ಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿಲುವಳಿ ಪ್ರಸ್ತುತಪಡಿಸಲಾಯಿತು. ಅದರಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್ ಅಶೋಕ್ ಇತ್ತೀಚೆಗೆ ಅಗಲಿದ ಎಲ್ಲಾ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಎಲ್ಲಕ್ಕಿಂತ ಗಮನ ಸೆಳೆದಿದ್ದು ಸ್ಪೀಕರ್ ಯುಟಿ ಖಾದರ್ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೊಗಳಿಕೆ ನೀಡಿದ್ದು. ಸಂತಾಪ ಸೂಚಿಸಲು ಎದ್ದು ನಿಂತ ಡಿಕೆಶಿ, ಮೊದಲು ಸ್ಪೀಕರ್ ಗೆ ಅಭಿನಂದನೆ ಸಲ್ಲಿಸಿದರು. ಸದನದ ಆಸನಗಳಿಗೆ, ದ್ವಾರಕ್ಕೆ ಚಿನ್ನದ ಬಣ್ಣ ಹೊಡೆಸಿದ್ದೀರಿ. ಇದಕ್ಕೆ ನಿಮಗೆ ಅಭಿನಂದನೆ ಮತ್ತು ಎಲ್ಲಾ ಶಾಸಕರ ಪರವಾಗಿ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೊಗಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡಾ ಸ್ಪೀಕರ್ ಕಾರ್ಯನಿರ್ವಹಣೆಗೆ ಅಭಿನಂದನೆ ಸಲ್ಲಿಸಿದರು. ಇಬ್ಬರೂ ಅಭಿನಂದನೆ ಸಲ್ಲಿಸಿದಾಗ ನಾಚಿಕೊಂಡ ಯುಟಿ ಖಾದರ್ ನಕ್ಕು ಮಾತು ಮುಂದುವರಿಸಿ ಎಂದು ಕೇಳಿಕೊಂಡರು. ಇತ್ತ ವಿಪಕ್ಷ ನಾಯಕ ಅಶೋಕ್ ಕೂಡಾ ಡಿಕೆಶಿಗೆ ಮೊದಲು ನಿಲುವಳಿ ಮುಗಿಸಿ ಆಮೇಲೆ ಅಭಿನಂದನೆ ಸಲ್ಲಿಸೋಣ ಎಂದರು.