ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ಗದ್ದಲ ಮಾಡುತ್ತಿದ್ದ ಶಾಸಕರಿಗೆ ಸ್ಪೀಕರ್ ಯುಟಿ ಖಾದರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶಾಸಕ ಶಿವಲಿಂಗೇಗೌಡರು ಎದ್ದು ನಿಂತು ಸಂತಾಪ ಸೂಚಿಸಲು ಮುಂದಾದಾಗ ಕೆಲವು ಶಾಸಕರು ಎದ್ದು ನಿಂತು ಓಡಾಡುವುದು, ತಮ್ಮ ಸಹ ಸದಸ್ಯರ ಜೊತೆ ಮಾತುಕತೆಯಲ್ಲಿ ಮುಳುಗಿದ್ದರು. ಇದು ಸ್ಪೀಕರ್ ಯುಟಿ ಖಾದರ್ ಗಮನಕ್ಕೆ ಬಂದಿದ್ದು, ಅಸಮಾಧಾನಕ್ಕೆ ಕಾರಣವಾಯಿತು.
ಸದನದಲ್ಲಿ ಸಂತಾಪ ಸೂಚನೆ ಎಂದರೆ ಅದು ಅಗಲಿದ ಗಣ್ಯರಿಗೆ ಗೌರವ ಸಮರ್ಪಿಸುವ ಒಂದು ಕ್ರಮ. ಆದರೆ ಈ ವೇಳೆ ಗಂಭೀರತೆ ಮರೆತು ತಮ್ಮದೇ ಲೋಕದಲ್ಲಿದ್ದ ಶಾಸಕರಿಗೆ ಸ್ಪೀಕರ್ ತಮ್ಮದೇ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡರು. ಸಂತಾಪ ಸೂಚಿಸುವಾಗ ಸ್ವಲ್ಪವಾದರೂ ಗೌರವ ಕೊಡಿ ಮಾರಾಯ್ರೇ.ನಿಮ್ಮ ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಹೀಗೆ ಮಾಡಿದ್ರೆ ಆಗ್ತದಾ ಎಂದರು.
ಅಗಲಿದವರ ಕುಟುಂಬದವರು ಟಿವಿಯಲ್ಲಿ ಸಂತಾಪ ಸೂಚನೆಯನ್ನು ನೋಡುತ್ತಿರುತ್ತಾರೆ. ಅವರಿಗೆ ಸ್ವಲ್ಪವಾದರೂ ಗೌರವ ಕೊಡಿ. ಸಂತಾಪ ಸೂಚನೆ ಮಾಡುವಾಗ ನಿಮ್ಮ ಪಾಡಿಗೆ ನೀವು ಮಾತನಾಡುತ್ತಿದ್ದರೆ ಹೇಗೆ? ಚೆಲುವರಾಯಸ್ವಾಮಿಯವರೇ ಸಂತಾಪ ಸೂಚಿಸುವವರೆಗೂ ಸ್ವಲ್ಪ ಕುಳಿತುಕೊಳ್ಳಿ ಎಂದು ಸ್ಪೀಕರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಸದಸ್ಯರು ಸೈಲೆಂಟ್ ಆದರು.