ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕಾರಕ್ಕಾಗಿ ವಿಧಾನಸಭಾ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗಾಗಿ ಶಾಸಕ ಮಾನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮುಖಂಡರು ಗಂಟೆಗಟ್ಟಲೆ ಕಾದು ಕುಳಿತ ಪ್ರಸಂಗ ನಡೆಯಿತು.ಅನಂತರ ಸ್ಪೀಕರ್ ಅವರಿಗೆ ಕರೆ ಮಾಡಿದ ಡಿ.ಕೆ.ಶಿವಕುಮಾರ್, `ಐದು ನಿಮಿಷ ಬಂದು ಪ್ರಮಾಣ ವಚನ ಮುಗಿಸಿ' ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, `ಬೇರೆಯವರಿಗೆ ಸಮಯ ಕೊಟ್ಟಿದ್ದೇನೆ' ಎಂದು ಉತ್ತರಿಸಿದರು. ಅದಕ್ಕೆ `ನಿಮ್ಮಿಷ್ಟ ನೋಡಿ' ಎಂದು ಡಿಕೆಶಿ ತಿಳಿಸಿದರು. ಈ ವೇಳೆ ಶಿವಕುಮಾರ್ ಅವರು ಸ್ಪೀಕರ್ ಕಚೇರಿಯಲ್ಲಿ ಹಾಕಿದ್ದ `ಪರಿವರ್ತನೆ ಜಗದ ನಿಯಮ'. `ಆದೆದ್ದಲ್ಲಾ ಒಳ್ಳೆಯದಕ್ಕೇ ಆಗಿದೆ, ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ. ಮುಂದೆ ಆಗಲಿರುವುದು ಒಳ್ಳೆಯದೇ ಆಗಲಿದೆ' ಎನ್ನುವ ಗೀತೆಯ ಸಾರಾಂಶವನ್ನು ಓದಿ ಶಾಸಕ ಶ್ರೀನಿವಾಸ ಮಾನೆ ಅವರಿಗೆ ವಿವರಿಸಿದರು.