ಬೆಳ್ತಂಗಡಿ: ದೇಶವನ್ನೇ ಸಂಚಲನ ಮೂಡಿಸಿದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯ ಅರ್ಜಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ವಜಾ ಮಾಡಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾ.ಜೆ.ಎಂ ಖಾಜಿ ಅವರ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಗೊಳಿಸಿದ್ದು ಸಂತೋಷ್ ರಾವ್ ನನ್ನು ಖುಲಾಸೆ ಗೊಳಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಸಿಬಿಐ ಮೇಲ್ಮನವಿ ಮತ್ತು ಮೃತ ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಗಳು ಹಾಗೂ ಪರಿಹಾರ ಕೋರಿ ಆರೋಪಿ ಸಂತೋಷ್ ರಾವ್ ಸಲ್ಲಿಸಿದ್ದ ಎಲ್ಲಾ 3 ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ.
ಅದೇ ರೀತಿ ಪ್ರಕರಣದಲ್ಲಿ ನಿರಪರಾಧಿಯೆಂದು ಹೊರ ಬಂದ ಸಂತೋಷ್ ರಾವ್ ತನಗೆ ಪರಿಹಾರ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.<>