Publish Date: Thu, 24 Sep 2015 (16:54 IST)
Updated Date: Thu, 24 Sep 2015 (16:55 IST)
ರಾಜ್ಯ ಸಂಪುಟ ವಿಸ್ತರಣೆ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ರಾಜ್ಯ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.
ಮಾತುಕತೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಸೋನಿಯಾ ಅವರೊಂದಿಗೆ ಸುಮಾರು ಅರ್ಧ ಗಂಟೆ ಚರ್ಚಿಸಿದ್ದೇನೆ. ಈ ವೇಳೆ ರಾಜ್ಯ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಿದ್ದು, ಎಲ್ಲಾ ವಿವರಗಳನ್ನು ನೀಡಿದ್ದೇನೆ. ಇದೇ ವೇಳೆ, ರಾಜ್ಯದಲ್ಲಿರುವ ಬರ ಪರಿಸ್ಥಿತಿ ಬಗ್ಗೆಯೂ ಕೂಡ ವಿವರಣೆ ನೀಡಿದ್ದು, ಸರ್ಕಾರದ ಸಾಧನೆಗಳನ್ನೂ ಕೂಡ ಸೋನಿಯಾ ಅವರ ಗಮನಕ್ಕೆ ತಂದಿದ್ದೇನೆ ಎಂದರು.
ಬಳಿಕ, ರಾಜ್ಯ ಸಂಪುಟ ವಿಸ್ತರಣೆ ಸಂಬಂಧ ಮತ್ತೊಮ್ಮೆ ವಿವರವಾಗಿ ಚರ್ಚಿಸುವ ಅಗತ್ಯವಿದ್ದು, ಅದಕ್ಕೆ ಪಕ್ಷದ ಎಲ್ಲಾ ವರಿಷ್ಠರೂ ಕೂಡ ಉಪಸ್ಥಿತಿ ವಹಿಸಿರಬೇಕು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಅವರು ಸ್ವದೇಶಕ್ಕೆ ವನಾಪಾಸಾದ ಮೇಲೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂಬ ಸಲಹೆಯನ್ನು ನೀಡಿದ್ದಾರೆ ಎಂದು ತಿಳಿಸಿದರು. ಇಬ್ಬರೂ ನಾಯಕರು ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿದ್ದು, ಅಕ್ಟೋಬರ್ 1ರ ಒಳಗೆ ವಾಪಾಸಾಗುವ ನಿರೀಕ್ಷೆ ಇದೆ.