ಚಿಕ್ಕಬಳ್ಳಾಪುರ: ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಸಂಚು ಮಾಡುತ್ತಿದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲಾ ವಿಫಲವಾಗಲಿದೆ. ನನಗೆ ದೇಶದ ತಾಯಂದಿರ ಆಶೀರ್ವಾದವಿದೆ ಎಂದು ಪ್ರಧಾನಿ ಮೋದಿ ಇಂದು ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ-ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮೋದಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರವಾಗಿ ಇಂದು ಅವರು ಮತಯಾಚನೆ ಮಾಡಿದರು. ಈ ವೇಳೆ ವಿಪಕ್ಷಗಳ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮೋದಿ ಭಾಷಣ ಆರಂಭಿಸಿದರು. ನಾವು ಈಗಾಗಲೇ ಉಚಿತವಾಗಿ ಪಡಿತರ ನೀಡುತ್ತಿದ್ದೇವೆ. ಇದು ಮುಂದಿನ 5 ವರ್ಷವೂ ಮುಂದುವರಿಯಲಿದೆ ಎಂದು ತಮ್ಮ ಸರ್ಕಾರದ ಯೋಜನೆಗಳನ್ನು ಭಾಷಣದಲ್ಲಿ ಪ್ರಸ್ತಾಪಿಸುತ್ತಾ ಸಾಗಿದರು.
ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಇಲ್ಲಿನ ರೈತ ವಿರೋಧಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಕೇಂದ್ರ ಸೇರಿಸಿ 4,000 ರೂ. ಹಣವನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಅದು ಸ್ಥಗಿತವಾಗಿದೆ. ವಿಕಸಿತ ಭಾರತಕ್ಕಾಗಿ ಎನ್ ಡಿಎ ಬೆಂಬಲಿಸಿ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರೂ ಇದ್ದರು.