ಬೆಂಗಳೂರು : ಬಹಳ ರಿಸ್ಕ್ ತೆಗೆದುಕೊಂಡು ಮನೆ ಮನೆಗೂ ಬೆಳಗ್ಗೆಯೇ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸುತ್ತದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮಳೆ ಇರಲಿ, ಚಳಿ ಇರಲಿ ಅಥವಾ ಯಾವುದೇ ತುರ್ತು ಸಂದರ್ಭವೂ ಇರಲಿ. ಬೆಳಗ್ಗೆ ನಾವು ನಿದ್ದೆಯಿಂದ ಏಳುವುದಕ್ಕೆ ಮುನ್ನವೇ ಪತ್ರಿಕೆ ನಮ್ಮ ಮನೆಯ ಅಂಗಳದಲ್ಲಿರುತ್ತದೆ. ಇದಕ್ಕೆ ಕಾರಣರಾದವರನ್ನು ಅಲಕ್ಷ್ಯ ಮಾಡುವಂತಿಲ್ಲ ಕೋವಿಡ್ ಸಮಯದಲ್ಲಿಯೂ ನಮ್ಮ ಮನೆಗೆ ಪತ್ರಿಕೆ ಬರುವುದು ನಿಲ್ಲಲಿಲ್ಲ. ತಮ್ಮ ಜೀವವನ್ನೂ ಲೆಕ್ಕಿಸದೇ ಮನೆಮನೆಗೂ ಪತ್ರಿಕೆ ಮುಟ್ಟಿಸಿದ್ದು ವಿತರಕರ ವೃತ್ತಿ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕವಾಗಿ ವೃತ್ತಿ ತಾರತಮ್ಯ ಇರಬಾರದು. ಮನೆ ಮನೆಗೂ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರನ್ನು ನಾವು ಮುಖ್ಯವಾಹಿನಿಯಲ್ಲಿ ಎಲ್ಲ ವೃತ್ತಿಪರರಿಗೂ ಸಿಗುವಂಥ ಸೌಲಭ್ಯಗಳು ಸಿಗಬೇಕು. ಸರಕಾರದಿಂದ ಸಿಗಬಹುದಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನವೇ ನಮಗೆ ಪತ್ರಿಕೆ ತಲುಪಿಸುವ ವಿತರಕರು, ಬಹುಬೇಗ ನಿದ್ದೆಯಿಂದ ಎದ್ದು, ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಅವರಿಗೆ ರಜೆ ಎಂಬುದೇ ಅಪರೂಪ. ಇವರ ಕಷ್ಟಕ್ಕೆ ನಾವು ಮಿಡಿಯಬೇಕು ಎಂದು ಸಚಿವರು ನುಡಿದರು
ವಸತಿ ಸಚಿವ ವಿ.ಸೋಮಣ್ಣ, ಕಾರ್ಮಿಕ ಸಚಿವ ಶಿವರಾಮ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.