50 ವರ್ಷಗಳ ಕಾಲ ಪಕ್ಷದಿಂದಲೇ ಅಧಿಕಾರ-ಅವಕಾಶಗಳನ್ನು ಪಡೆದ ಆಜಾದ್ ಉಂಡ ಮನೆಗೆ ಎರಡು ಬಗೆಯಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರು ಇಂದು ಸರಣಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಒಳ್ಳೆಯ ದಿನಗಳಲ್ಲಿ ಅಧಿಕಾರ-ಅವಕಾಶಗಳನ್ನು ಅನುಭವಿಸಿರುವ ಗುಲಾಂ ನಬೀ ಆಜಾದ್, ಕಷ್ಟದ ಕಾಲದಲ್ಲಿ ಪಕ್ಷದ ಜೊತೆಗೆ ನಿಲ್ಲಬೇಕಾಗಿರುವುದು ಕರ್ತವ್ಯವಾಗಿತ್ತು. ಆದರೆ ಆಜಾದ್ ಅವರು ಪಕ್ಷದ ಕಷ್ಟದ ಕಾಲದಲ್ಲಿಯೇ ಕುಂಟು ನೆಪಗಳನ್ನು ಮುಂದಿಟ್ಟು ವಿದಾಯ ಹೇಳಿರುವುದು ದ್ರೋಹ ಚಿಂತನೆಯಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಕಾಂಗ್ರೆಸ್ ಕಷ್ಟದ ದಿನಗಳಲ್ಲಿದೆ. ಕೇಂದ್ರದ ಸರ್ವಾಧಿಕಾರಿ ಪ್ರಭುತ್ವದಿಂದಾಗಿ ದೇಶ ಕಷ್ಟದಲ್ಲಿದೆ. ದೇಶಾದ್ಯಂತ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿವೆ. ಈ ಸ್ಥಿತಿಯಲ್ಲಿ ಆಜಾದ್ ಯಾರ ಪರ ಇರಬೇಕಾಗಿತ್ತು? ಇಂದಿರಾಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ಪ್ರಧಾನಿಗಳ ಸಂಪುಟದಲ್ಲಿ ದೀರ್ಘಕಾಲ ಸಚಿವರಾಗಿದ್ದ ಆಜಾದ್ ಅವರು ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಪಕ್ಷದ ವಿವಿಧ ಘಟಕಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿದ್ದವರು. ಇನ್ನೇನು ಬೇಕಿತ್ತು ಅವರಿಗೆ..? ಒಬ್ಬ ಸಾಮಾನ್ಯ ಕಾರ್ಯಕರ್ತ ಪಕ್ಷದಿಂದ ಬಯಸುವ ಎಲ್ಲ ಹುದ್ದೆ ಮತ್ತು ಅವಕಾಶಗಳನ್ನು ಆಜಾದ್ ಅವರು ಪಡೆದಿದ್ದಾರೆ ಎಂದು ಸಿದ್ದು ಗುಡುಗಿದ್ದಾರೆ.