ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಲ್ಲೇಶ್ವರಂ ಠಾಣೆ ಇನ್ಸಪೆಕ್ಟರ್ ಅವರಿಗೆ ಮನವಿ ಸಲ್ಲಿಸಿರುವ ಸ್ಮಿತಾ, ಜೂ.15ರಂದು ತಡರಾತ್ರಿ 2 ಗಂಟೆ ಸುಮಾರಿಗೆ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಗೆ ದುಷ್ಕರ್ಮಿಗಳು ನುಗ್ಗಲು ಯತ್ನಿಸಿದ್ದು, ಮನೆಯ ಕಾಂಪೌಂಡ್‌ನಲ್ಲಿರುವ ಲೈಟ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಮನೆ ಆವರಣದಲ್ಲಿರುವ ಹಲಸಿನ ಮರದ ಕಾಯಿಗಳನ್ನು ಕೀಳಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದುಷ್ಕರ್ಮಿಗಳ ಕೃತ್ಯಗಳಿಂದ ತಮಗೆ ಭಯವಾಗುತ್ತಿದೆ. ಉದ್ದೇಶಪೂರ್ವಕವಾಗಿ ಕೆಲವು ಕಿಡಿಗೇಡಿಗಳು ನಮ್ಮ ಮನೆ ಆವರಣದಲ್ಲಿ ಮಧ್ಯರಾತ್ರಿ ನಡೆಸುತ್ತಿರುವ ದಾಂಧಲೆಗಳು ನೆಮ್ಮದಿ ಹಾಳುಮಾಡಿವೆ. ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಕೋರಿದ್ದಾರೆ. ಈ ಹಿಂದೆಯೂ ಎರಡು ಬಾರಿ ಇದೇ ರೀತಿಯ ಘಟನೆ ನಡೆದಿತ್ತು. ಆಗ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ಆದರೂ ದುಷ್ಕರ್ಮಿಗಳ ಕೃತ್ಯ ನಿಂತಿಲ್ಲ. ಇದೀಗ ಮತ್ತೆ ಮನೆ ಮುಂದೆ ದಾಂಧಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ
ವಿಷಯ ತಿಳಿದ ತಕ್ಷಣ ಮಲ್ಲೇಶ್ವರ ಠಾಣೆ ಪೊಲೀಸರು ಸ್ಮಿತಾ ರಾಕೇಶ್ ಅವರ ಮನಗೆ ಭೇಟಿ ನೀಡಿ ದುಷ್ಕರ್ಮಿಗಳ ಕೃತ್ಯದ ಬಗ್ಗೆ ಮಾಹಿತಿ ಪಡೆದು ಸೂಕ್ತ ಭದ್ರತೆ ಒದಗಿಸಿದ್ದಾರೆ.