ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅಂತಹ ಘಟನೆ ನಡೆದಿದ್ದು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಂಸದ ಸೈಯದ್ ನಾಸಿರ್ ಹುಸೇನ್ ಬೆಂಬಲಿಗರೊಬ್ಬರು ನಿನ್ನೆ ವಿಧಾನಸೌಧ ಆವರಣದಲ್ಲಿ ರಾಜ್ಯಸಭೆ ಚುನಾವಣೆ ಗೆದ್ದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಘಟನೆ ಈಗ ಆಡಳಿತಾರೂಢ ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ. ಘಟನೆ ಬಗ್ಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷ ಬಿಜೆಪಿ ಸದನ ಮತ್ತು ಹೊರಗೆ ಪ್ರತಿಭಟನೆಗೆ ಮುಂದಾಗಿದೆ.
ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಯೇ ಎಂದು ಮೊದಲು ಸಾಬೀತಾಗಬೇಕಿದೆ. ಒಂದು ವೇಳೆ ಘೋಷಣೆ ಕೂಗಿದ್ದು ಸಾಬೀತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದೇಷ ದ್ರೋಹಿಗಳನ್ನು ಮಟ್ಟಹಾಕಲಾಗುವುದು ಎಂದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಅಂತಾರೆ ಇನ್ನು ಕೆಲವರು ನಾಸಿರ್ ಸಾಬ್ ಜಿಂದಾಬಾದ್ ಎಂದಿದ್ದರು ಎಂದಿದ್ದಾರೆ. ಹೀಗಾಗಿ ಘಟನೆ ಬಗ್ಗೆ ಸೂಕ್ತ ವರದಿ ಬಂದ ನಂತರವಷ್ಟೇ ಕ್ರಮ ಕೈಗೊಳ್ಳಬಹುದು ಎಂದಿದ್ದರು. ಅದರ ಬೆನ್ನಲ್ಲೇ ಸಿಎಂ ಕೂಡಾ ಹೇಳಿಕೆ ನೀಡಿದ್ದಾರೆ. ಇನ್ನು, ಸಚಿವ ಪ್ರಿಯಾಂಕ್ ಖರ್ಗೆ ಪಾಕ್ ಪರ ಯಾರೂ ಘೋಷಣೆ ಕೂಗಿಲ್ಲ. ರಾಜ್ಯಸಭೆ ಸೋಲಿನ ಹತಾಶೆಯಲ್ಲಿ ಬಿಜೆಪಿಯವರು ಈ ರೀತಿ ಸುಳ್ಳು ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ.