Publish Date: Mon, 06 Feb 2017 (17:55 IST)
Updated Date: Mon, 06 Feb 2017 (17:57 IST)
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸಿಎಂ ಧರ್ಮಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ವಿಜಯಪುರದ ಮುದ್ದೇಬಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮಹಾ ಸಮುದ್ರ ಇದ್ದಂತೆ. ಏನಾದರೂ ಹೆಚ್ಚು ಕಡಿಮೆ ಎನ್ನಿಸಿದೂ ಹೊಂದಿಕೊಂಡು ಹೋಗಬೇಕು ಎಂದರು.
ಕೃಷ್ಣ ಅವರ ಮುಂದಿನ ನಡೆ ಇನ್ನೂ ಖಚಿತವಾಗಿಲ್ಲ. ಅವರು ಬಿಜೆಪಿ ಪಕ್ಷ ಸೇರುತ್ತಾರೆ ಎನ್ನುವುದು ಮಾಧ್ಯಮದ ಸೃಷ್ಟಿ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಹೈಕಮಾಂಡ್ ಪ್ರಯತ್ನ ನಡೆಸಿದೆ. ಕೃಷ್ಣ ಅವರು ಸಮಯ ಕೊಟ್ಟರೆ ನಾನು ಸಹ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಕೃಷ್ಣ ಅವರು ಕಾಂಗ್ರೆಸ್ ಪಕ್ಷ ತೊರೆಯಲು ಕಾರಣ ಗೊತ್ತಾಗಲಿಲ್ಲ. ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯಬೇಕು. ನಮಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮಾಜಿ ಸಿಎಂ ಧರ್ಮಸಿಂಗ್ ಮನವಿ ಮಾಡಿಕೊಂಡರು.