ಬೆಂಗಳೂರು: ಸಂಸದ ಪ್ರಜ್ವಲ್ ವಿರುದ್ಧ ಮಹಿಳೆಯೊಬ್ಬರು ನೀಡಿರುವ ಲೈಂಗಿಕ ದೌರ್ಜನ್ಯದ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರಜ್ವಲ್ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಇದಕ್ಕೆಲ್ಲ ಹೆದರಲ್ಲ, ಕಾನೂನು ಹೋರಾಟ ಮಾಡ್ತಿನಿ ಎಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮೊದಲ ಬಾರಿ ಪ್ರತಿಕ್ರಿಯಿಸಿದ ಪ್ರಜ್ವಲ್ ತಂದೆ, ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು, ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ. ಇದೆಲ್ಲಾ ರಾಜಕೀಯ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್‌ಐಟಿಗೆ ವಹಿಸಿದೆಯಲ್ಲಾ, ಎಸ್‌ಐಟಿ ತನಿಖೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ಮನೆ ಕೆಲಸದಾಕೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ನಲ್ಲಿ ಹೆಚ್.ಡಿ.ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.
ಇನ್ನು ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷದವರು ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆ ನಡೆಸಿ ಆತನನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.