ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಳಿದ ವರ್ಗಗಳ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂದಿಲ್ಲಿ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಕಡಿತ ಮಾಡಿ ಸರ್ಕಾರವು ಮುಸ್ಲಿಮರಿಗೆ ಕೊಟ್ಟಿದ್ದು ಖಂಡನೀಯ ಎಂದರಲ್ಲದೇ ಕೂಡಲೇ ಮುಸ್ಲಿಮರಿಗೆ ನೀಡಿದ ಮೀಸಲಾತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಹೀಗೆ ಮಾಡಿದ್ದು ಸಂವಿಧಾನ ಬದ್ಧವೇ ಎಂಬುದರ ಕುರಿತು ಸಂವಿಧಾನ ತಜ್ಞರೂ, ವಕೀಲರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟನೆ ನೀಡಲಿ, ಹೀಗೆ ಮಾಡದೇ ಹೋದರೆ ಹಿಂದುಳಿದ ವರ್ಗಗಳ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಇಂತಹದಕ್ಕೆ ಅವಕಾಶ ಕೊಡುವುದಿಲ್ಲ ಎಂದರು. ಕಾಂಗ್ರೆಸ್ ಸರ್ಕಾರವು ಈ ಮೂಲಕ ಹಿಂದುಳಿದ ವರ್ಗಗಳಿಗೆ ಚಿಪ್ಪು ಕೊಟ್ಟಿದೆ. ಒಬಿಸಿ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ರವಿ ವಿವರಿಸಿದರು.
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಶಿಕ್ಷಣ ಸಚಿವರಿಗೆ ತಾವೇನು ಮಾತನಾಡುತ್ತಿದ್ದೇವೆ ಎಂಬುದೇ ಅರಿವಿಲ್ಲ. ೫,೮ ಹಾಗೂ ೯ ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ಎಂದು ಹೇಳಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಮ್ ಕೋರ್ಟ್ ಛೀಮಾರಿ ಹಾಕಿದೆ. ಸಿಇಟಿ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯದ ಹೊರತಾಗಿ ಪ್ರಶ್ನೆಗಳು ಕಾಣಿಸಿಕೊಂಡಿವೆ. ಕೆಪಿಎಸ್ಸಿಯಲ್ಲೂ ಗೊಂದಲಗಳಿವೆ ಮುಖ್ಯಮಂತ್ರಿಗಳು ಇವುಗಳ ಕುರಿತು ಜಾಣ ಮೌನ ತಾಳಿದ್ದಾರೆ. ರಾಜ್ಯ ಸರ್ಕಾರವು ಮಕ್ಕಳ ಭವಿಷ್ಯ ಕುರಿತು ಜಾಣ ಮೌನ ತಾಳಿದೆ ಎಂದರು.
ದೇಶದಲ್ಲಿ ಬಿಜೆಪಿ ನೀತಿ, ನೇತೃತ್ವ ಹಾಗೂ ನಿಯತ್ತು ಹೀಗೆ ಮೂರು ವಿಷಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಬಿಜೆಪಿ ಎಲ್ಲಕ್ಕಿಂದ ದೇಶವೇ ಮೊದಲು ಎಂಬ ನಂಬಿಕೆಯಿದೆ. ವಿದೇಶಾಂಗ ನೀತಿಯಿಂದ ಹಿಡಿದು ಆಂತರಿಕ ಭದ್ರತೆವರೆಗೆ ಇದೇ ನೀತಿಯಿದೆ. ಸಬ್ ಕೆ ಸಾಥ ಸಬ್ ಕೆ ವಿಕಾಸ ಎಂಬುದು ಬಿಜೆಪಿಯ ಮೂಲ ಮಂತ್ರ ಎಂದರು. ಪ್ರಧಾನಿ ಮೋದಿ ಹೇಳಿದಂತೆ ಬಿಜೆಪಿಗೆ ನಾಲ್ಕು ಜಾತಿಗಳಿವೆ. ಬಡವರು, ರೈತರು, ಮಹಿಳೆಯರು ಮತ್ತು ಯುವಜನರು. ಇವರನ್ನು ಪ್ರಗತಿಯತ್ತ ಒಯ್ಯಲು ಅನೇಕ ಯೋಜನೆಗಳಿವೆ ಎಂದರು. ನೇತೃತ್ವ ಎಂಬುದು ಪಕ್ಷ ಕೊಟ್ಟಿದ್ದಲ್ಲ. ಜನರೇ ಒಪ್ಪಿಕೊಂಡಿದ್ದು. ಮೋದಿ ಅವರ ಜನಪ್ರಿಯತೆ, ಸಮರ್ಥ ನೇತೃತ್ವವನ್ನು ಇಂದು ಇಡೀ ಜಗತ್ತೇ ಪ್ರಶಂಸೆ ಮಾಡುತ್ತಿದೆ ಎಂದರು.
ಗ್ಯಾರಂಟಿ ಶಬ್ದವನ್ನು ತಮ್ಮದೇ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದು, ತಮ್ಮದೇ ಪೇಟೆಂಟ್ ಎನ್ನುತ್ತಾರೆ. ಉದ್ಧರಣೆಯಲ್ಲಿ ತೀರ್ಥ ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಸರ್ಕಾರದ ಖಜಾನೆಯಿಂದ ದುಡ್ಡು ಕೊಟ್ಟು ತಾವು ಕೊಟ್ಟಿದ್ದು ಎಂದು ಪ್ರಚುರಪಡಿಸುತ್ತಿದ್ದಾರೆ ಎಂದು ರವಿ ಆರೋಪಿಸಿದರು. ಕಾಂಗ್ರೆಸ್ನ ಗ್ಯಾರಂಟಿ ಎಂಬುದು ಮಹಾವಂಚನೆ, ಒಂದು ರಾಜಕೀಯ ಕುತಂತ್ರ. ಮೀನು ಹಿಡಿಯಲು ಎರೆಹುಳು ಗಾಳಕ್ಕೆ ಸಿಕ್ಕಿಸುತ್ತಾರೆ. ಹಾಗೆ ಈ ಗ್ಯಾರಂಟಿಗಳು. ಮತದಾರರನ್ನು ಸೆಳೆಯಲು ಗಾಳ ಹಾಕಿದ್ದಾರೆ. ಮೀನು ಸಿಕ್ಕ ಮೇಲೆ ಮಸಾಲೆ ಆರೆಯುತ್ತಾರೆ ಎಂದರು.
ಮೋದಿ ಅವರ ಗ್ಯಾರಂಟಿಗಳು ಬಡವರ ಬದುಕನ್ನು ಬದಲು ಮಾಡುವ ಸಾಮರ್ಥ್ಯ ಹೊಂದಿವೆ. ಈ ಹತ್ತು ವರ್ಷಗಳಲ್ಲಿ ದೇಶದ ೨೫ ಕೋಟಿ ಬಡಜನರು ಮಧ್ಯಮವರ್ಗದ ಸ್ತರಕ್ಕೆ ಏರಿದ್ದಾರೆ. ಇದುವೇ ಬಿಜೆಪಿಯ ಕಾರ್ಯಕ್ರಮ ಎಂದರು. ಯುಪಿಎ ಹತ್ತು ವರ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸರ್ಕಾರ ಈ ಹಿಂದೆ ಸರ್ಕಾರ ನಡೆಸಿತ್ತು. ಮತ್ತು ಈಗ ಯಾವ ಸಾಧನೆ ಮಾಡಿದ್ದಾರೆ ಎಂಬುದನ್ನು ವಿವರಿಸಲಿ. ರಾಜ್ಯದ ಜನತೆಯೇ ಹೋಲಿಕೆ ಮಾಡಿ ನಿರ್ಣಯ ಕೊಡಲಿ ಎಂದರು.
ಈ ಬಾರಿ ರಾಜ್ಯದಲ್ಲಿ ಎನ್ಡಿಎ ಎಲ್ಲ ೨೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿವೆ. ಐಐಟಿ, ಜಗತ್ತಿನ ಅತಿ ದೊಡ್ಡ ರೇಲ್ವೆ ಪ್ಲಾಟ್ಫಾರ್ಮ್, ಆಸ್ಪತ್ರೆ, ಹೆದ್ದಾರಿಗಳು ಹೀಗೆ ಮೊದಲಾದ ಕಾರ್ಯಗಳು ಆಗಿವೆ. ಧಾರವಾಡ ಕ್ಷೇತ್ರದ ಜನರು ಜೋಶಿ ಅವರನ್ನು ಪುನರಾಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬರಪರಿಹಾರ ವಿಷಯದಲ್ಲೂ ರಾಜ್ಯ ಕಾಂಗ್ರೆಸ್ ಕೇಂದ್ರದ ಮೇಲೆ ಗೂಬೆ ಕೂರಿಸಿ ಅಪಪ್ರಚಾರ ಮಾಡುತ್ತಿದೆ. ನ್ಯಾಯಾಲಯವು ಈ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.