ಆಸ್ತಿಗಾಗಿ ಮಕ್ಕಳೇ ವೃದ್ಧ ತಂದೆ-ತಾಯಿಗಳ ಮೇಲೆ ಹಲ್ಲೆ ನಡೆಸಿದ ಅಮಾನುಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರಹಳ್ಳಿ ಬಳಿಯ ಅರೇಹಳ್ಳಿಯಲ್ಲಿ ಈ ಘಟನೆ ನಡೆದಿದ್ದು 86 ವರ್ಷದ ಗುರಪ್ಪ ಮತ್ತು ಅವರ ಪತ್ನಿ ವೆಂಕಟಮ್ಮ(76) ಅವರ ಮೇಲೆ ಮಕ್ಕಳೇ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ವೃದ್ಧ ವೆಂಕಟಮ್ಮ ಮತ್ತು ಅವರ ಪತಿಯ ಕೈಗೆ ಗಾಯಗಳಾಗಿವೆ.
ಮಹೇಂದ್ರ & ಮಹೇಂದ್ರ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಗುರಪ್ಪ 2 ನಿವೇಶನ ಮತ್ತು 2 ಕಟ್ಟಡಗಳನ್ನು ಹೊಂದಿದ್ದಾರೆ. ಎರಡು ಕಟ್ಟಡಗಳಿಂದ ಒಟ್ಟು 40,000 ಬಾಡಿಗೆಯನ್ನು ಪಡೆಯುತ್ತಾರೆ. ತಮಗೆ ಆಸ್ತಿ ನೀಡುವಂತೆ ಒತ್ತಾಯಿಸಿ ಮಕ್ಕಳು ಕಳೆದ 5 ವರ್ಷದಿಂದ ಹಿಂಸೆ ನೀಡುತ್ತಿದ್ದು ಕಳೆದ 3 ದಿನಗಳ ಹಿಂದೆ ಕೊನೆಯ ಮಗ ರವಿ ಮತ್ತು ಅವರ ಸೊಸೆ ಹಲ್ಲೆ ನಡೆಸಿದ್ದಾರೆ ಎಂದು ಗುರಪ್ಪ ಮತ್ತು ಪತ್ನಿ ಆರೋಪಿಸಿದ್ದಾರೆ.
ಐದು ಜನ ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೂ ಸಹ ತಮಗೆ ನರಕದರ್ಶನವಾಗುತ್ತಿದೆ. ಮಕ್ಕಳಿಂದ ನಮ್ಮನ್ನು ರಕ್ಷಿಸಿ ಎಂದು ವೃದ್ಧ ತಂದೆ ತಾಯಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆದರೆ ವೃದ್ಧ ತಂದೆ-ತಾಯಿಗಳು ವಿನಾಕಾರಣ ಅವರೇ ಮೈ ಕೈಗೆ ಗಾಯ ಮಾಡಿಕೊಂಡಿದ್ದಾರೆ. ನಾನೇನು ಮಾಡಿಲ್ಲ. ಅವರೇ ನಮ್ಮ ಮೇಲೆ ಶೋಷಣೆಯನ್ನು ಮಾಡುತ್ತಾರೆ ಎಂದು ವೃದ್ಧರ ಕೊನೆಯ ಮಗ ಆರೋಪಿಸುತ್ತಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.