Select Your Language

Notifications

webdunia
webdunia
webdunia
webdunia

14 ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಹೆಸರಲ್ಲಿ ಈಗ ಆಸ್ತಿ ಮಾರಾಟ!

14 ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಹೆಸರಲ್ಲಿ  ಈಗ ಆಸ್ತಿ ಮಾರಾಟ!
ರಾಮನಗರ , ಭಾನುವಾರ, 8 ಆಗಸ್ಟ್ 2021 (14:14 IST)
ರಾಮನಗರ(ಆ.8): ಆ ವ್ಯಕ್ತಿ ಸತ್ತು 14 ವರ್ಷಗಳೇ ಕಳೆದಿವೆ. ಆದರೆ ಈಗ ಆತನ ನಕಲಿ ದಾಖಲೆಗಳನ್ನ ಸೃಷ್ಟಿಸಿ ಆತನ ಹೆಸರಿನಲ್ಲಿದ್ದ ಜಮೀನನ್ನು ಕಬಳಿಕೆ ಮಾಡಲಾಗಿದೆ. ಅಕ್ರಮವಾಗಿ ಕಬಳಿಕೆ ಮಾಡಿದ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಲು ಮುಂದಾದಾಗ ಖದೀಮ ಸಿಕ್ಕಿಬಿದ್ದಿದ್ದು ಈಗ ಎಸ್ಕೇಪ್ ಆಗಿದ್ದಾನೆ. ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. 

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ನಾಗರಾಜು ಎಂಬುವರಿಗೆ ಈ ಅನ್ಯಾಯವಾಗಿದೆ. ಈ ವಿಚಾರವಾಗಿ ಕನಕಪುರ ತಾಲೂಕು ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದ ಸರ್ವೆ ನಂ 76/2ರಲ್ಲಿ 35 ಗುಂಟೆ ಮತ್ತು ಸರ್ವೆ ನಂ.76/9ರಲ್ಲಿ 15 ಗುಂಟೆ ಒಟ್ಟು 1.5 ಎಕರೆ ಜಮೀನನ್ನು ಕಬಳಿಸಲು ಭೂಗಳ್ಳರು ಹುನ್ನಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಜಮೀನು ಚನ್ನಪಟ್ಟಣ ತಾಲೂಕು ಯಲಿಯೂರು ಗ್ರಾಮದ ವಾಸಿಯಾದ ಬೀರ ಹೆಗ್ಗಡೆ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದು, ಅವರ ಮರಣ ನಂತರ ಪುತ್ರ ನಾಗರಾಜು ಕಾರಣಾಂತರಗಳಿಂದ ಖಾತೆ ವರ್ಗಾಯಿಸಿಕೊಂಡಿಲ್ಲ, ವ್ಯವಸಾಯವನ್ನು ಮಾಡಿಲ್ಲ. ಜಮೀನಿನ ವಿಚಾರವಾಗಿ ಹೆಚ್ಚು ಗಮನಹರಿಸಿಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಪಕ್ಕದ ಜಮೀನಿನ ಮಾಲೀಕ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಕುಂತೂರು ಗ್ರಾಮದ ವಾಸಿ ಚಿಕ್ಕ ರಘುಗೌಡ ಪುತ್ರ ಗೋಪಾಲಕೃಷ್ಣ ಎಂಬಾತ ಬೀರಹೆಗ್ಗಡೆ ಹೆಸರಿನ ವ್ಯಕ್ತಿ ಹಾಗೂ ಪೂರಕವಾದ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿಯಂತಹ ದಾಖಲೆಗಳನ್ನು ಸೃಷ್ಟಿಸಿ 2021ರ ಜನವರಿ 13ರಂದು ಅಕ್ರಮವಾಗಿ ನೊಂದಣಿ ಕ್ರಯ ಪತ್ರ ಮಾಡಿಸಿಕೊಂಡು ಅದರಂತೆ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ.
ಇನ್ನು 2007 ರಲ್ಲಿಯೇ ಬೀರ ಹೆಗಡೆ ಸಾವನ್ನಪ್ಪಿದ್ದಾರೆ. ಆದರೆ  14 ವರ್ಷಗಳ ಹಿಂದೆಯೇ ಸಾವನ್ನಪ್ಪಿರುವ ವ್ಯಕ್ತಿಯಿಂದ ಜಮೀನನ್ನ ಪರಭಾರೆ ಮಾಡಿರುವುದಾಗಿ ದಾಖಲೆ ಸ್ಱಷ್ಟಿಸಿರುವುದು ಆಶ್ಚರ್ಯವಾಗಿದೆ. ಈಗಾಗಲೇ ಗೋಪಾಲಕೃಷ್ಣರವರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೂ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಜಮೀನನ್ನು ಬೇರೆಯವರಿಗೆ ಪರಭಾರೆ ಮಾಡಲು ಹೊರಟಿರುವ ಈತ ಎಸ್ಕೇಪ್ ಆಗಿದ್ದಾನೆ. ಕೂಡಲೇ ಗೋಪಾಲಕೃಷ್ಣ , ನಕಲಿ ದಾಖಲೆ ಸೃಷ್ಟಿಸಲು ಹಾಗೂ ಖಾತೆ ಮಾಡಿಕೊಡಲು ಸಹಕರಿಸಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾಗರಾಜು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಒಟ್ಟಾರೆ ತನ್ನ ಜಮೀನಿಗೆ ಖಾತೆ ಮಾಡಿಸಿಕೊಳ್ಳದನ್ನ ಗಮನಿಸಿದ ಪಕ್ಕದ ಜಮೀನಿನ ಮಾಲೀಕ ಗೋಪಾಲಕೃಷ್ಣ ನಾಗರಾಜುಗೆ ದೋಖಾ ಮಾಡಿದ್ದಾನೆ.  ಹಾಗಾಗಿ ಈತನನ್ನ ಕೂಡಲೇ ಬಂಧಿಸಿ ವಿಚಾರಣೆ ನಡೆಸಿ, ನಮಗೆ ನ್ಯಾಯ ಕೊಡಿಸಬೇಕೆಂದು ನೊಂದವರು ನ್ಯೂಸ್ 18 ಮೂಲಕ ಮನವಿ ಮಾಡಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ರಾಮನಗರ ಎಸ್ಪಿ ಎಸ್.ಗಿರೀಶ್ ಕೂಡಲೇ ಆತನನ್ನ ಬಂಧಿಸಿ ವಿಚಾರಣೆ ನಡೆಸುತ್ತೇವೆಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ಮಾಹಿತಿ ನೀಡಿ ಸೂಕ್ತ ತನಿಖೆ ನಡೆಸಿ ಪ್ರಕರಣದ ಬಗ್ಗೆ ವರದಿ ನೀಡ್ತೇವೆಂದು ತಿಳಿಸಿದ್ದಾರೆ. ಇನ್ನು ನಮಗೆ ನ್ಯಾಯ ಸಿಗದಿದ್ದರೆ ನಾಗರಾಜು ಹಾಗೂ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಲು ಚಿಂತಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 39,070 ಕೊರೊನಾ ಸೋಂಕು ದೃಢ; 491 ಸೋಂಕಿತರು ಬಲಿ