ಬೆಂಗಳೂರು : ರೈತರ ಬದುಕಿನ ಅನಿಶ್ಚಿತತೆಯನ್ನು ಬದಲಾಯಿಸಲು ಔಟ್ಲುಕ್ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶುಕ್ರವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ- 2023 ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ಮುಂದಿನ ಋತುವಿಗೆ ಎಷ್ಟು ಮಳೆಯಾಗಬಹುದು ಎಂದು ಕಳೆದ 10 ವರ್ಷಗಳ ಮಳೆ ಮಾದರಿಯನ್ನು ಆಧರಿಸಿ, ಬಿತ್ತನೆ, ಉತ್ಪಾದನೆ, ಅಂತರರಾಷ್ಟ್ರೀಯ ಮಾರುಕಟ್ಟೆ, ಸ್ಥಳೀಯ ಮಾರುಕಟ್ಟೆಗಳನ್ನು ಪರಿಶೀಲಿಸಿ, ಒಂದು ಬೆಲೆಯನ್ನು ನಿಗದಿ ಮಾಡುವ ಔಟ್ಲುಕ್ ವರದಿ ತಯಾರಿಸುತ್ತಾರೆ.
ಈ ವರದಿಯನ್ನು ಸಿದ್ಧಪಡಿಸಬೇಕು. ರೈತ ಬೆಳೆಯುವ ಬೆಳೆಗೆ ಎಷ್ಟು ಖರ್ಚು ತಗುಲಿ, ಎಷ್ಟು ಧಾರಣೆ ದೊರೆಯುತ್ತದೆ ಎಂದು ತಿಳಿದರೆ, ಈ ಮೊತ್ತದೊಳಗೆಯೇ ಖರ್ಚು ಮಾಡುತ್ತಾನೆ. ಬೆಳೆ ಉಳಿಸುವ ಸಲುವಾಗಿ ಖರ್ಚು ಮಾಡುವ ಈ ವಿಧಾನದ ಬಗ್ಗೆ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು. ಈ ವರದಿಯನ್ನು ಇಲಾಖೆ ಹಾಗೂ ಕೃಷಿ ದರ ಆಯೋಗದ ಸಹಯೋಗದೊಂದಿಗೆ ಸಿದ್ಧಪಡಿಸಬೇಕು ಎಂದರು.