ಬೆಂಗಳೂರು: ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಕೇಸ್ನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಕೋರ್ಟ್ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಇದೀಗ ಈ ಪ್ರಕರಣವನ್ನು ಮೊದಲು ಬಯಲಿಗೆಳೆದಿದ್ದ ಅಂದಿನ ಕರ್ನಾಟಕ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದು, ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನಿಂದ ನನಗೆ ಬಹಳ ಖುಷಿಯಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಅಕ್ರಮ ಅದಿರು ಸಾಗಣೆ ಕೇಸ್ನಲ್ಲಿ ಶಿಕ್ಷೆಯಾಗಿದ್ದು ಉತ್ತಮ ಬೆಳವಣಿಗೆ ಎಂದಿದ್ದಾರೆ.
ಅಂದು ಈ ಪ್ರಕರಣವನ್ನು ಮಾಡುವಾಗ ದೊಡ್ಡ ರಾಜಕಾರಣಿಗಳ ವಿರುದ್ಧ ತನಿಖೆ ವೇಳೆ ಅಡೆತಡೆ ಎದುರಾಗಿತ್ತು. ನನ್ನ ಜೊತೆ ಕೆಲಸ ಮಾಡಿದ ಅಧಿಕಾರಿಗಳಿಗೆ ಸಂತೃಪ್ತಿ ಸಿಕ್ಕಂತಾಗುತ್ತೆ. ಶಿಕ್ಷೆಯಾಗಿರುವುದರಿಂದ ನ್ಯಾಯಾಂಗದ ಶಕ್ತಿ ತೋರಿಸಿದಂತಾಗುತ್ತೆ. ಅಕ್ರಮದಲ್ಲಿ ಇನ್ನೂ ಹಲವರು ಇದ್ದಾರೆ, ಅವರಿಗೂ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.