Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ದ್ರೌಪದಿ ಮುರ್ಮರ ಬಗ್ಗೆ ವ್ಯಂಗ್ಯ

webdunia
bangalore , ಸೋಮವಾರ, 18 ಜುಲೈ 2022 (17:39 IST)
ರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಬೆಂಬಲದೊಂದಿಗೆ ಸ್ಪರ್ಧಿಸಿರುವ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ರಬ್ಬರ್ ಸ್ಟಾಂಪ್ ಎಂದು ಮಾತನಾಡುವುದು ಆದಿವಾಸಿ ಜನಾಂಗದ ಬಗ್ಗೆ ಇರುವ ಅಸಡ್ಡೆಯ ಭಾವನೆಯನ್ನು ತೋರಿಸುತ್ತದೆ ಹಾಗಾಗಿ ಕೂಡಲೇ ಕಾಂಗ್ರೆಸ್, ಆರ್​ಜೆಡಿ ಸೇರಿದಂತೆ ಹಾಗೆ ಕರೆದವರು ರಾಷ್ಟ್ರದ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ.
 
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗಿನ ಎನ್‍ಡಿಎ ಮತ್ತು ಇತರ ಸಮರ್ಥನೆ ಮಾಡಿದ ಪಕ್ಷಗಳ ಬಲವನ್ನು ಗಮನಿಸಿದರೆ ಶೇ. 70ಕ್ಕೂ ಹೆಚ್ಚು ಮತಗಳು ಸಿಗುವ ನಿರೀಕ್ಷೆ ಇದೆ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ನನಗಿದೆ.
 
ಆದಿವಾಸಿ ಮಹಿಳೆಯ ಅಭ್ಯರ್ಥಿತನವನ್ನು ಇತರ ಎಲ್ಲ ಪಕ್ಷಗಳು ಸ್ವಾಗತಿಸಿ ಬೆಂಬಲಿಸುವ ನಿರೀಕ್ಷೆ ನಮ್ಮದಾಗಿತ್ತು. ಆದರೆ, ಹಾಗಾಗದೇ ಇರುವುದು ದುರ್ದೈವದ ಸಂಗತಿ ಎಂದು ಅಭಿಪ್ರಾಯಪಟ್ಟರು. ಕೆಲವು ರಾಜಕೀಯ ಪಕ್ಷಗಳು ಬಿಜೆಪಿಯನ್ನು ವಿರೋಧಿಸಬೇಕೆಂಬ ಭರದಲ್ಲಿ ರಾಷ್ಟ್ರವನ್ನು, ಆದಿವಾಸಿ ಮಹಿಳೆಯ ಉಮೇದುವಾರಿಕೆಯನ್ನು ವಿರೋಧಿಸಿ ಅವರ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯ ಮಾತನ್ನಾಡಿದರು.
 
ಒಬ್ಬ ಆದಿವಾಸಿ ಮಹಿಳೆ ತಾನು ಕಲಿಯುವ ವಾತಾವರಣ ಇಲ್ಲದೆ ಇದ್ದಾಗ ಅವರು ಸುಶಿಕ್ಷಿತೆಯಾಗಿ ಕಲಿತು, ಸರ್ಕಾರಿ ನೌಕರಿ, ಉಪನ್ಯಾಸಕಿ, ಕಾರ್ಪೊರೇಟರ್, ಶಾಸಕಿ, ಒಡಿಶಾ ಸರ್ಕಾರದಲ್ಲಿ ಸಚಿವೆಯಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಜಾರ್ಖಂಡ್ ರಾಜ್ಯದ ರಾಜ್ಯಪಾಲೆಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಸಿಟಿ ರವಿ ಹೇಳಿದರು.ಬಿಜೆಪಿ ಸಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ : ಬಿಜೆಪಿ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರುವ ಪಕ್ಷ. ನಮಗೆ ಮೊದಲನೇ ಬಾರಿ ರಾಷ್ಟ್ರಪತಿ ಆಯ್ಕೆ ಅವಕಾಶ ಸಿಕ್ಕಿದಾಗ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ನಾವು ಗೌರವಾನ್ವಿತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದೆವು.
 
ಅವರು ಜನರ ಹೃದಯವನ್ನು ಗೆದ್ದ ರಾಷ್ಟ್ರಪತಿಯಾದರು. ಎರಡನೇ ಬಾರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದಲಿತ ವರ್ಗದ ಗೌರವಾನ್ವಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಅವರು ಕಳಂಕರಹಿತ ಆಡಳಿತ ಕೊಟ್ಟಿದ್ದಾರೆ. ಮೂರನೇ ಬಾರಿ ಅವಕಾಶ ಲಭಿಸಿದಾಗ ಆದಿವಾಸಿ ಮಹಿಳೆಗೆ ಅವಕಾಶ ಕೊಟ್ಟು ಹೊಸ ದಾಖಲೆ ಬರೆದಿದ್ದೇವೆ ಎಂದು ತಿಳಿಸಿದರು.ಸಾಮಾಜಿಕ ನ್ಯಾಯದ ಮುಖವಾಡ ಹಾಕಿದ ರಾಜಕೀಯ ಪಕ್ಷಗಳು ಆದಿವಾಸಿ ಮಹಿಳೆಯ ಉಮೇದುವಾರಿಕೆ ವಿರೋಧಿಸುವ ಮೂಲಕ ಹಾಗೂ ಅವರನ್ನು ರಬ್ಬರ್ ಸ್ಟಾಂಪ್ ಎಂದು ಅಪಮಾನಿಸಿದ್ದು, ಅವರ ಮುಖವಾಡ ಕಳಚಿಬಿದ್ದಿದೆ ಎಂದರಲ್ಲದೇ, ಸಿದ್ದರಾಮಯ್ಯರೇ ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
 
ನಾನು ಯಾವತ್ತೂ ದಲಿತರ ಪರ, ಹಿಂದುಳಿದವರ ಪರ, ಆದಿವಾಸಿಗಳ ಪರ, ಅಲ್ಪಸಂಖ್ಯಾತರ ಪರ ಎನ್ನುತ್ತಿದ್ದಿರಲ್ಲವೇ? ನಿಮಗೆ ಬದ್ಧತೆ ಇದ್ದರೆ ನೀವು ಆದಿವಾಸಿ ಮಹಿಳೆ ಮುರ್ಮು ಅವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ನಿಮಗೆ ಬದ್ಧತೆ ಇಲ್ಲ. ನಿಮ್ಮದು ಕೇವಲ ಮುಖವಾಡ ಮಾತ್ರ ಎಂದು ಆಕ್ಷೇಪಿಸಿದರು.ಸಿದ್ದರಾಮಯ್ಯರ ಮುಖವಾಡ ಕಳಚಿಬಿದ್ದಿದೆ. ನಾಟಕಕ್ಕೆ ನೀವು ದಲಿತರ ಪರ ಹಾಗೂ ಅಲ್ಪಸಂಖ್ಯಾತರ ಪರ ಎಂದು ಮಾತನಾಡುತ್ತೀರಿ. ನಿಮಗೆ ಬದ್ಧತೆ ಇಲ್ಲದೆ ಇರುವುದು ಈ ಉಮೇದ್ವಾರಿಕೆಯಿಂದ ವ್ಯಕ್ತವಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟೀಕಿಸಿದರು.
 
ಸಿ.ಟಿ ರವಿಯವರಿಗೆ ಹುಟ್ಟು ಹಬ್ಬದ ಸಂಭ್ರಮ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರಿಗೆ ಇಂದು ಜನ್ಮದಿನದ ಸಂಭ್ರಮ. 55 ನೇ ವಸಂತಕ್ಕೆ ಕಾಲಿಟ್ಟ ಸಿ.ಟಿ ರವಿ ಬಿಜೆಪಿ ಶಾಸಕರೊಂದಿಗೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ಬೀಡು ಬಿಟ್ಟಿದ್ದ ಪಕ್ಷದ ಶಾಸಕರ ಜೊತೆ ಸಿ.ಟಿ ರವಿ ತಂಗಿದ್ದು, ಸ್ವಪಕ್ಷೀಯ ಶಾಸಕರೊಂದಿಗೆ ಈ ಬಾರಿಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಪಕ್ಷದ ಶಾಸಕರು ಸಿಟಿ ರವಿಗೆ ಹುಟ್ಟುಹಬ್ಬದ ಶುಭ ಕೋರಿದರು‌.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ