ಇಂದು ಬೆಳಗ್ಗೆಯಷ್ಟೇ ಡಾ. ಸುಧಾಕರ್, ಸಿದ್ದರಾಮಯ್ಯನವರ ಪರೋಕ್ಷ ಅಥವಾ ಅಪರೋಕ್ಷ ಪಾತ್ರದ ಕಾರಣದಿಂದಲೇ ಕೆಲವರು ರಾಜೀನಾಮೆ ನೀಡಿದ್ದರು ಎಂದು ಟ್ವೀಟ್ ಮೂಲಕ ಹೇಳಿದ್ದರು. ಇದೀಗ ಅದೇ ಧಾಟಿಯ ಟ್ವೀಟ್ ಒಂದನ್ನು ಎಸ್.ಟಿ ಸೋಮಶೇಖರ್ ಪೋಸ್ಟ್ ಮಾಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ಎಸ್.ಟಿ ಸೋಮಶೇಖರ್, ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದು ಎಂದು ಬರೆದುಕೊಂಡಿದ್ದಾರೆ. ಇದೀಗ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಗಾದಿಗಾಗಿ ಪಟ್ಟು ಬಿಡದೇ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಟ್ವೀಟ್ಗಳನ್ನು ಬಿಜೆಪಿ ನಾಯಕರು ಹರಿಯ ಬಿಡುತ್ತಿರುವುದು ಅಚ್ಚರಿಯ ನಡೆಯಾಗಿದೆ. ಮೇಲ್ನೋಟಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯರೇ ಕಾರಣವಾದರಾ ಎನ್ನುವ ಪ್ರಶ್ನೆಯನ್ನು ಈ ಟ್ವೀಟ್ಗಳು ಹುಟ್ಟು ಹಾಕುತ್ತವೆ. ಇದರಿಂದ ಕಾಂಗ್ರೆಸ್ನ ಸಿಎಂ ಆಯ್ಕೆ ಮೇಲೆ ಪ್ರಭಾವ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ