Publish Date: Fri, 02 Nov 2018 (08:49 IST)
Updated Date: Fri, 02 Nov 2018 (08:52 IST)
ಬೆಂಗಳೂರು: ಕಾರವಾರದಲ್ಲಿ ನಡೆದ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಯುವ ಕ್ರೀಡಾಳುಗಳಿಗೆ ಸಲ್ಲಬೇಕಿದ್ದ ಕ್ರೀಡಾ ಪರಿಕರಗಳನ್ನು ಎಸೆದು ಅವಮಾನ ಮಾಡಿದ ಸಚಿವ ಆರ್ ವಿ ದೇಶಪಾಂಡೆ ವಿರುದ್ಧ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಗರಂ ಆಗಿದ್ದಾರೆ.
ಸಚಿವರು ಕ್ರೀಡಾ ಪರಿಕರಗಳನ್ನು ಎಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಚಿವರ ನಡೆಯನ್ನು ಬಿಜೆಪಿ ಟೀಕಿಸಿದೆ. ಅಷ್ಟೇ ಅಲ್ಲ ಮತ್ತೊಬ್ಬ ಎಚ್ ಡಿ ರೇವಣ್ಣ ಎಂದು ಲೇವಡಿ ಮಾಡಿದೆ. ಹಿಂದೆ ಕೊಡಗು ಪ್ರವಾಹ ಸಂತ್ರಸ್ತರಿಗೆ ಬಿಸ್ಕತ್ ಎಸೆದು ಸಚಿವ ಎಚ್ ಡಿ ರೇವಣ್ಣ ಅವಮಾನ ಮಾಡಿದ್ದು ಭಾರೀ ವಿವಾದವಾಗಿತ್ತು.
ಇದರ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಹಾಗೂ ಸ್ವತಃ ಕ್ರೀಡಾಳುವಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಈ ವರ್ತನೆ ನಿಜವಾಗಿಯೂ ಒಪ್ಪಿಕೊಳ್ಳುವಂತಹದ್ದಲ್ಲ. ಮಿ. ದೇಶಪಾಂಡೆ ಅಲ್ಲಿರುವ ಕ್ರೀಡಾಳುಗಳ ಗೌರವವನ್ನು ಮತ್ತು ನಿಮ್ಮ ಗೌರವವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಗರಂ ಆಗಿಯೇ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.