ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುವ ಅಮೆರಿಕ ಪ್ರಾಯೋಜಿತ ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್ಎಸ್ಸಿ)ಯ ನಿರ್ಣಯದ ಮೇಲಿನ ಮತದಾನದಿಂದ ಭಾರತವು ಶನಿವಾರ ದೂರವುಳಿದಿದೆ. ಚೀನಾ ಮತ್ತು ಯುಎಇ ಕೂಡ ಮತದಾನದಿಂದ ದೂರವಿದ್ದವು. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆ ಏಕೈಕ ಮಾರ್ಗವಾಗಿದೆ ಎಂದು ಭಾರತ ಸರಕಾರವು ಹೇಳಿದೆ.
ಅಮೆರಿಕ,ಬ್ರಿಟನ್,ಫ್ರಾನ್ಸ್,ಘಾನಾ,ಕೆನ್ಯಾ,ಗಬನ್,ಆಯರ್ಲಂಡ್,ಅಲ್ಬೇನಿಯಾ,ನಾರ್ವೆ,ಮೆಕ್ಸಿಕೊ ಮತ್ತು ಬ್ರಾಝಿಲ್ ನಿರ್ಣಯವನ್ನು ಬೆಂಬಲಿಸಿದ್ದವಾದರೂ ರಷ್ಯಾ ತನ್ನ ವಿಟೋ ಅಧಿಕಾರವನ್ನು ಚಲಾಯಿಸಿದ್ದರಿಂದ ನಿರ್ಣಯವು ಅಂಗೀಕಾರಗೊಳ್ಳಲಿಲ್ಲ.
ಅಮೆರಿಕ ಮತ್ತು ಅಲ್ಬೇನಿಯಾ ನಿರ್ಣಯವನ್ನು ಮಂಡಿಸಿದ್ದು, ಆಸ್ಟ್ರೇಲಿಯಾ, ಎಸ್ಟೋನಿಯಾ,ಫಿನ್ಲಂಡ್,ಜಾರ್ಜಿಯಾ,ಜರ್ಮನಿ,ಇಟಲಿ,ಲೀಚೆನ್ಸ್ಟೀನ್,ಲಕ್ಸೆಂಬರ್ಗ್,ಲಿಥುವಾನಿಯಾ,ನ್ಯೂಝಿಲ್ಯಾಂಡ್,ನಾರ್ವೆ,ಪೋಲಂಡ್,ರೊಮೇನಿಯಾ ಮತ್ತು ಬ್ರಿಟನ್ ಸೇರಿದಂತೆ ಇತರ ಹಲವಾರು ದೇಶಗಳು ನಿರ್ಣಯವನ್ನು ಸಹಪ್ರಾಯೋಜಿಸಿದ್ದವು.
ಯುಎನ್ಎಸ್ಸಿ ನಿರ್ಣಯವು ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ಉಕ್ರೇನ್‌ನ ಗಡಿಗಳ ಒಳಗೆ ಅದರ ಸಾರ್ವಭೌಮತೆ,ಸ್ವಾತಂತ್ರ,ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪುನರುಚ್ಚರಿಸಿತ್ತು.
ಉಕ್ರೇನ್ ವಿರುದ್ಧ ರಷ್ಯದ ಆಕ್ರಮಣವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದ ನಿರ್ಣಯವು,ರಷ್ಯಾ ಉಕ್ರೇನ್ ವಿರುದ್ಧ ತನ್ನ ಬಲಪ್ರಯೋಗವನ್ನು ತಕ್ಷಣ ನಿಲ್ಲಿಸಬೇಕು ಮತ್ತು ವಿಶ್ವಸಂಸ್ಥೆಯ ಯಾವುದೇ ಸದಸ್ಯ ರಾಷ್ಟ್ರದ ವಿರುದ್ಧ ಕಾನೂನುಬಾಹಿರ ಬೆದರಿಕೆ ಅಥವಾ ಬಲ ಪ್ರಯೋಗದಿಂದ ದೂರವುಳಿಯಬೇಕು ಎಂದು ಒತ್ತಿ ಹೇಳಿತ್ತು.
ರಷ್ಯಾ ತಕ್ಷಣ ಉಕ್ರೇನ್‌ನಿಂದ ತನ್ನ ಮಿಲಿಟರಿ ಪಡೆಗಳನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಎಂದು ಹೇಳಿದ್ದ ನಿರ್ಣಯವು,ಉಕ್ರೇನ್‌ನ ಡೊನೆಸ್ಕ್ ಮತ್ತು ಲುಹನ್ಸ್ಕ್‌ಗಳ ಕೆಲವು ಪ್ರದೇಶಗಳಿಗೆ ಮಾನ್ಯತೆ ನೀಡಿರುವ ತನ್ನ ನಿರ್ಧಾರವನ್ನು ಬೇಷರತ್ತಾಗಿ ಹಿಂದೆಗೆದುಕೊಳ್ಳುವಂತೆ ರಷ್ಯಾಕ್ಕೆ ಸೂಚಿಸಿತ್ತು.
ರಷ್ಯಾದ ಕ್ರಮಗಳನ್ನು ಖಂಡಿಸಲು ನಿರ್ಣಯದಲ್ಲಿ ಬಳಸಲಾಗಿದ್ದ ಕಟುವಾದ ಭಾಷೆಯನ್ನು ಭಾರತವು ಅನುಮೋದಿಸಲಿಲ್ಲ. ಭಾರತವು ಎರಡೂ ಕಡೆಗಳಲ್ಲಿ ವ್ಯೂಹಾತ್ಮಕ ಪಾಲುದಾರರನ್ನು ಹೊಂದಿರುವುದರಿಂದ ಅಮೆರಿಕ ನೇತೃತ್ವದ ಪಾಶ್ಚಾತ್ಯ ಬಣ ಮತ್ತು ರಷ್ಯಾ ಜೊತೆ ಸಮತೋಲನವನ್ನು ಕಾಯ್ದುಕೊಳ್ಳಲು ಅದು ಬಯಸುತ್ತದೆ.ಭಾರತವು ಮತದಾನದಿಂದ ದೂರವಿದ್ದುದು ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ.
ಭಾರತವು ಹಿಂದಿನಿಂದಲೂ ರಷ್ಯಾ ಮತ್ತು ಪಾಶ್ಚಿಮಾತ್ಯ ಜಗತ್ತಿನ ನಡುವೆ ಸಮತೋಲನವನ್ನು ಕಾಯ್ದುಕೊಂಡು ಬಂದಿದೆ. ಜ.31ರಂದು ಉಕ್ರೇನ್ ವಿಷಯವನ್ನು ಚರ್ಚಿಸಬೇಕೇ ಎನ್ನುವುದರ ಮೇಲೆ ಕಾರ್ಯವಿಧಾನ ಮತದಾನದಿಂದ ಭಾರತವು ದೂರವಿತ್ತು. ಆದರೆ ಚೀನಾ ಜ.31ರಂದು ವಿರುದ್ಧ ಮತವನ್ನು ಚಲಾಯಿಸಿದ್ದರಿಂದ ಮತ್ತು ಅದು ರಷ್ಯಾದ ನಿಲುವನ್ನು ಪ್ರತಿಧ್ವನಿಸುತ್ತದೆ ಎಂದು ಪರಿಗಣಿಸಲಾಗಿದ್ದರಿಂದ ಅದು ಶನಿವಾರದ ಮತದಾನದಿಂದ ದೂರವಿದ್ದುದು ಅಚ್ಚರಿಯನ್ನು ಮೂಡಿಸಿದೆ.ಮತದಾನದಿಂದ ದೂರವುಳಿದಿದ್ದಕ್ಕೆ ಭಾರತವು ವಿವರಣೆಯನ್ನು ನೀಡಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರು ಹೇಳಿಕೆಯೊಂದನ್ನು ಹೊರಡಿಸಿ, ಉಕ್ರೇನ್‌ನಲ್ಲಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತವು ತೀವ್ರವಾಗಿ ಕಳವಳಗೊಂಡಿದೆ. ಹಿಂಸಾಚಾರವನ್ನು ನಿಲ್ಲಿಸುವಂತೆ ತನ್ನ ಮನವಿಯನ್ನು ಭಾರತವು ಪುನರುಚ್ಚರಿಸಿದೆ. ಮಾನವ ಜೀವಗಳನ್ನು ಬಲಿಗೊಟ್ಟು ಪರಿಹಾರವನ್ನು ಕಂಡುಕೊಳ್ಳಲು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಹೆಚ್ಚಿನವರು ವಿದ್ಯಾರ್ಥಿಗಳೇ ಸೇರಿದಂತೆ ಉಕ್ರೇನ್‌ನಲ್ಲಿರುವ 16,000ಕ್ಕೂ ಅಧಿಕ ಭಾರತೀಯ ಪ್ರಜೆಗಳ ಯೋಗಕ್ಷೇಮ ಮತ್ತು ಭದ್ರತೆಯ ಬಗ್ಗೆ ಭಾರತವು ತೀವ್ರ ಕಳವಳಗೊಂಡಿದೆ ಎಂದು ಹೇಳಿದ ತಿರುಮೂರ್ತಿ,ಸಮಕಾಲೀನ ಜಾಗತಿಕ ಸುವ್ಯವಸ್ಥೆಯು ವಿಶ್ವಸಂಸ್ಥೆಯ ಸನದು,ಅಂತರರಾಷ್ಟ್ರೀಯ ಕಾನೂನು ಹಾಗೂ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವದ ಮೇಲೆ ರೂಪುಗೊಂಡಿದೆ. ಮುಂದಿನ ರಚನಾತ್ಮಕ ಮಾರ್ಗವನ್ನು ಕಂಡುಕೊಳ್ಳಲು ಎಲ್ಲ ಸದಸ್ಯ ರಾಷ್ಟ್ರಗಳು ಈ ತತ್ವಗಳನ್ನು ಗೌರವಿಸಬೇಕು ಎಂದು ತಿಳಿಸಿದರು.
ಹೇಳಿಕೆಯಲ್ಲಿ ರಾಜತಾಂತ್ರಿಕತೆಯನ್ನು ಪ್ರತಿಪಾದಿಸಿದ ತಿರುಮೂರ್ತಿ,ಈ ಕ್ಷಣಕ್ಕೆ ಎಷ್ಟೇ ಬೆದರಿಕೆಯಿರುವಂತೆ ಕಂಡು ಬರುತ್ತಿದ್ದರೂ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆ ಏಕೈಕ ಮಾರ್ಗವಾಗಿದೆ. ರಾಜತಾಂತ್ರಿಕತೆಯ ಮಾರ್ಗವನ್ನು ಕೈಬಿಟ್ಟಿರುವುದು ವಿಷಾದನೀಯವಾಗಿದೆ. ನಾವು ಅದಕ್ಕೆ ಮರಳಲೇಬೇಕು. ಈ ಎಲ್ಲ ಕಾರಣಗಳಿಂದಾಗಿ ಭಾರತವು ಮತದಾನದಿಂದ ದೂರವುಳಿಯುವುದನ್ನು ಆಯ್ಕೆ ಮಾಡಿಕೊಂಡಿತ್ತು ಎಂದು ವಿವರಿಸಿದರು.
ಯುಎನ್ಎಸ್ಸಿ ಶನಿವಾರ ನಸುಕಿನಲ್ಲಿ ನಿರ್ಣಯವನ್ನು ಕೈಗೆತ್ತಿಕೊಳ್ಳುವ ಮುನ್ನ ಭಾರತವು ಪಾಶ್ಚಾತ್ಯ ಜಗತ್ತು ಮತ್ತು ರಷ್ಯಾದ ನಡುವಿನ ರಾಜತಾಂತ್ರಿಕ ಗೋಜಲಿನಲ್ಲಿ ಸಿಕ್ಕಿಕೊಂಡಿತ್ತು. ಗುರುವಾರ ತಡರಾತ್ರಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾರೊವ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಉಕ್ರೇನ್ ಬಿಕ್ಕಟ್ಟನ್ನು ಬಗೆಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಒತ್ತಿ ಹೇಳಿದ್ದರು. ರಷ್ಯದ ಪಡೆಗಳು ಕೀವ್ ನಗರದ ಹೆಬ್ಬಾಗಿಲನ್ನು ತಲುಪುತ್ತಿದ್ದಂತೆ ಜೈಶಂಕರ್ ಗೆ ದೂರವಾಣಿ ಕರೆಯನ್ನು ಮಾಡಿದ್ದ ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ಪರಿಸ್ಥಿತಿಯ ಬಗ್ಗೆ ತನ್ನ ವೌಲ್ಯಮಾಪನವನ್ನು ಹಂಚಿಕೊಂಡಿದ್ದರು.