ಬಸ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಿನಿಮೀಯ ಶೈಲಿಯಲ್ಲಿ ಬೈಕ್ ಚಲಾಯಿಸಿದ ಸವಾರ. ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ದೃಶ್ಯ ವೈರಲ್.
ಖಾಸಗಿ ಬಸ್ ತಿರುವು ತೆಗೆಯುತ್ತಿದ್ದಾಗ ಸ್ಕೂಟರ್‌ನಲ್ಲಿ ಅತೀ ವೇಗದಲ್ಲಿ ಬಂದ ಯುವಕನೊಬ್ಬ ಬಸ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ ಗೇಟ್ ಒಂದಕ್ಕೆ ಬಡಿದು ಅಂಗಡಿ ಮತ್ತು ಮರವೊಂದರ ಸಣ್ಣ ಅಂತರದಲ್ಲಿ ಸ್ಕೂಟರ್ ಅನ್ನು ಚಲಾಯಿಸಿಕೊಂಡು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಅಂಬ್ಲಿಮೊಗರು ಗ್ರಾಮದ ಎಲ್ಯಾರ್‌ಪದವು ಬಳಿ ನಡೆದಿದೆ.
ಯುವಕ ಸಿನಿಮೀಯ ಶೈಲಿಯಲ್ಲಿ ಅಪಘಾತವನ್ನು ತಪ್ಪಿಸಿ ಸ್ಕೂಟರ್ ಚಲಾಯಿಸಿದ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎಲ್ಯಾರ್‌ಪದವು ಬಳಿ ಇಂಡೋ ಫಿಶರಿಸ್ ಮೀನಿನ ಸಂಸ್ಕರಣ ಘಟ ಕದ ಎದುರು ಘಟನೆ ನಡೆದಿದ್ದು, ಸಂಸ್ಥೆಯ ಮೂರು ಸಿಸಿ ಟಿವಿಯಲ್ಲಿ ದಾಖಲಾದ ವೀಡಿಯೋ ವೈರಲ್ ಆಗುತ್ತಿದೆ. ಪಾವೂರು ಗ್ರಾಮದ ಮಲಾರ್ ಮೂಲದ ಯುವಕ ಸಾವಿನ ದವಡೆಯಿಂದ ಪಾರಾಗಿದ್ದು, ಘಟನೆ ಸಂದರ್ಭದಲ್ಲಿ ಮೀನಿನ ಘಟಕದ ಬಾಗಿಲಿಗೂ ಸ್ಕೂಟರ್ ಬಡಿದಿದ್ದು, ಅಂಗಡಿ ಮತ್ತು ಮರದ ನಡುವಿನ ಸಣ್ಣ ಅಂತರದಲ್ಲಿ ಸ್ಕೂಟರ್ ಸಂಚರಿಸಿದಾಗ ಆತನ ಹೆಲ್ಮೆಟ್ ಕೆಳಗೆ ಬಿದ್ದಿದೆ. ಯುವಕ ಅದೇ ವೇಗದಲ್ಲಿ ಘಟನಾ ಸ್ಥಳದಿಂದ ಸ್ಕೂಟರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಘಟನೆಯ ವಿವರ
ಮಂಗಳೂರಿನಿಂದ ಎಲ್ಯಾರ್ ಕಡೆ ಸಂಚರಿಸುವ ರೂಟ್ ನಂಬರ್ 44ರ ಖಾಸಗಿ ಬಸ್ ಎಲ್ಯಾರ್ ಪದವಿನಿಂದ ಸ್ವಲ್ಪ ಮುಂದೆ ಇರುವ ಇಂಡೋ ಫಿಶರಿಸ್ ಸಂಸ್ಥೆಯ ಎದುರು ವಾಪಾಸ್ ಮಂಗಳೂರಿಗೆ ತೆರಳಲು ಚಾಲಕ ಬಸ್ ಅನ್ನು ತಿರುಗಿಸುತ್ತಿದ್ದಾಗ ವೇಗದಲ್ಲಿ ಬಂದ ಸ್ಕೂಟರ್ ಬಸ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ ಮೀನು ಸಂಸ್ಕರಣಾ ಘಟಕದ ಬದಿಯಲ್ಲಿದ್ದ ಅಂಗಡಿಯೊಂದರ ಮೇಲ್ಛಾವಣೆಗೆ ಹಾಕಿದ ಕಬ್ಬಿಣದ ರಾಡ್ ಮತ್ತು ಆದರ ಬದಿಯಲ್ಲಿದ್ದ ಮರದ ನಡುವೆ ಸ್ಕೂಟರ್ ಅದೇ ವೇಗದಲ್ಲಿ ಸಂಚರಿಸಿದೆ. ಮರ ಮತ್ತು ರಾಡ್ ನಡುವೆ ಒಂದು ಸ್ಕೂಟರ್ ಕಷ್ಟದಲ್ಲಿ ಹೋಗುವಷ್ಟು ಮಾತ್ರ ಸ್ಥಳವಿದ್ದರೂ ಸವಾರ ಚಾಕಚಕ್ಯತೆಯಿಂದ ಸ್ಕೂಟರ್ ಚಲಾಯಿಸಿರುವುದು ವೈರಲ್ ಆಗಲು ಕಾರಣವಾಗಿದೆ.