ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಅಪರೂಪದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನಗಣಿ ಹೊರವಲಯದಲ್ಲಿ ಬರುವ ಪಾಮನಕಲ್ಲೂರು ಕ್ರಾಸ್ ಬಳಿ ಇನ್ನೊವಾ ವಾಹನದಲ್ಲಿ ನಾಗರ ಹಾವು ಪತ್ತೆಯಾಗಿತ್ತು.
ಕಾರಿನಿಂದ ನಾಗರಹಾವನ್ನು ಹೊರ ತೆಗೆಯಲು ಸಾಕಷ್ಟು ಪ್ರಯತ್ನಪಡಲಾಯಿತು. ಬಳಿಕ ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ, ಅರವಳಿಕೆ ತಜ್ಞ ಡಾ. ರವೀಂದ್ರನಾಥ್ ಅವರು ಹಾವು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಹಾವು ಹೊರಬರಲು ಫಿನಾಯಿಲ್ ಸಿಂಪಡನೆ ಮಾಡಲಾಗಿದೆ. ಇದರ ವಾಸನೆಗೆ ನಾಗರಹಾವು ಮೂರ್ಛೆ ತಪ್ಪಿದೆ.
ಕೂಡಲೇ ವೈದ್ಯಾಧಿಕಾರಿ ಹಾಗೂ ಲಿಂಗಸುಗೂರು ಉರಗತಜ್ಞ ಖಾಲೀದ್ ಚಾವೂಸ್ ಅವರು ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಿದ್ದಾರೆ. ಇದರಿಂದ ಮೂರ್ಛೆ ಹೋಗಿದ್ದ ನಾಗಹಾವಿಗೆ ಮರು ಜೀವ ಬಂದಂತಾಗಿದೆ. ಬಳಿಕ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ.