Select Your Language

Notifications

webdunia
webdunia
webdunia
webdunia

ಆದಿವಾಸಿ ಕುಟುಂಬ ಲೈನ್‍ಮನೆಗಳಿಂದ ಬಿಡುಗಡೆಗೊಳಿಸಿ; ಆದಿವಾಸಿಗಳ ಒಕ್ಕೊರಲ ಅಭಿಪ್ರಾಯ

ಆದಿವಾಸಿ ಕುಟುಂಬ ಲೈನ್‍ಮನೆಗಳಿಂದ ಬಿಡುಗಡೆಗೊಳಿಸಿ; ಆದಿವಾಸಿಗಳ ಒಕ್ಕೊರಲ ಅಭಿಪ್ರಾಯ
bangalore , ಬುಧವಾರ, 16 ಫೆಬ್ರವರಿ 2022 (21:16 IST)
ಪರಿಶಿಷ್ಟ ಪಂಗಡದ ಆದಿವಾಸಿ ಕುಟುಂಬಗಳ ವಿವಿಧ ಬೇಡಿಕೆ/ಸಮಸ್ಯೆಗಳ ಕುರಿತು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡ ವಿವಿಧ ಸಂಘಟನೆಗಳ ಮುಖಂಡರ ಜೊತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಮಾಲೋಚನಾ ಸಭೆ ನಡೆಯಿತು.  
ಸಭೆಯ ಆರಂಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪರಶುರಾಮ ಅವರು ಹೈಸೊಡ್ಲೂರು ಗ್ರಾಮದಲ್ಲಿ 8 ಎಕರೆ ಜಾಗವಿದ್ದು, ನಿವೇಶನ ರಹಿತ ಪರಿಶಿಷ್ಟ ಪಂಗಡ ಆದಿವಾಸಿ ಕುಟುಂಬದವರಿಗೆ ನಿವೇಶನ ಹಂಚಿಕೆ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಲೈನ್‍ಮನೆಗಳಲ್ಲಿ ಆದಿವಾಸಿಗಳು ಟಾರ್ಪಲ್ ಹೊದಿಕೆ ನಿರ್ಮಿಸಿಕೊಂಡು ತುಂಬಾ ಕಷ್ಟದಲ್ಲಿ ಬದುಕು ಸವೆಸುತ್ತಿದ್ದಾರೆ. ಇವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.  
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಗ್ರಾಮ ಪಂಚಾಯಿತಿನಲ್ಲಿ ವಸತಿ ಹಾಗೂ ನಿವೇಶನ ರಹಿತರ ಪಟ್ಟಿ ಇದ್ದು, ಅದರಂತೆ ಕ್ರಮವಹಿಸಲಾಗುವುದು. ಶಾಲೆ, ಅಂಗನವಾಡಿ ಪ್ರಥಮ ಆದ್ಯತೆ ನೀಡಲಾಗುವುದು. ಉಳಿದಂತೆ ನಿವೇಶನ ರಹಿತರಿಗೆ ನಿವೇಶನ ಒದಗಿಸಲಾಗುವುದು ಎಂದು ಅವರು ಹೇಳಿದರು. 
ಬಸವ, ಅಂಬೇಡ್ಕರ್, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲಾಗುವುದು. 94ಸಿ ನಡಿ ಮಾರ್ಚ್ 31 ರವರೆಗೂ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಅರ್ಹರು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.  
ಕುಡಿಯರ ಮುತ್ತಪ್ಪ ಅವರು ಮಾತನಾಡಿ 94 ಸಿ ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಕೇಳುತ್ತಾರೆ. ಹಲವು ಕುಟುಂಬಗಳಲ್ಲಿ ಈ ಗುರುತಿನ ಚೀಟಿಗಳೇ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. 
ಆರ್.ಕೆ.ಚಂದ್ರ ಅವರು ಮಾತನಾಡಿ ಯಡವನಾಡು ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಪತ್ರ ನೀಡಿರುವ ಕುಟುಂಬಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಜೊತೆಗೆ ಕಾನೂನು ನೆರವು ಪಡೆಯುವಂತಾಗಲು ವಕೀಲರನ್ನು ನಿಯೋಜಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.  
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ಸೇವೆ ಪಡೆಯಬಹುದಾಗಿದೆ. ಜಿಲ್ಲೆಯ 78 ಕಡೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಮುಂದಾಗಬೇಕು. ಜೊತೆಗೆ ಆಧಾರ್ ಕಾರ್ಡ್ ಪಡೆಯಲು ಅಗತ್ಯ ಇರುವ ಕಡೆ ಶಿಬಿರ ಆಯೋಜಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 
ಪ್ರಮುಖರಾದ ಅಪ್ಪಾಜಿ ಅವರು ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡಿರುವ ಕುಟುಂಬಗಳಿಗೆ ಪ್ರತ್ಯೇಕ ಆರ್‍ಟಿಸಿ ಒದಗಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. 
ಜೆ.ಕೆ.ಮುತ್ತಮ್ಮ ಅವರು ಮಾತನಾಡಿ ಅರಣ್ಯ ಹಕ್ಕು ಕಾಯ್ದೆಯಡಿ ಪ್ರತೀ ಕುಟುಂಬಕ್ಕೂ ಸರ್ವೇ ಮಾಡಿಸಿ, ಕನಿಷ್ಠ 5 ಎಕರೆ ಭೂಮಿ ಒದಗಿಸಬೇಕು. ಮಳೆಗಾಲದ ಅವಧಿಯಲ್ಲಿ 6 ತಿಂಗಳ ಕಾಲ ಪ್ರತೀ ತಿಂಗಳು ಆದಿವಾಸಿ ಕುಟುಂಬಗಳಿಗೆ ಪೌಷ್ಠಿಕ ಆಹಾರ ವಿತರಿಸಬೇಕು ಎಂದು ಅವರು ಕೋರಿದರು. 
ಕೃಷ್ಣಪ್ಪ ಅವರು ಮಾತನಾಡಿ ಜಿಲ್ಲೆಯ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಕನಿಷ್ಠ 3 ಸೆಂಟ್ ಜಾಗ ನೀಡುವಂತಾಗಬೇಕು ಎಂದು ಅವರು ಕೋರಿದರು. 
ಲೈನ್‍ಮನೆಗಳಲ್ಲಿ ವಾಸಿಸುವ ಕುಟುಂಬಗಳ ಸರ್ವೇಯನ್ನು ಈಗಾಗಲೇ ಐಟಿಡಿಪಿ ಇಲಾಖೆಯಿಂದ ಮಾಡಲಾಗಿದೆ. ಅಂತಹ ಲೈನ್‍ಮನೆಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಕನಿಷ್ಠ ಸೌಲಭ್ಯ ಒದಗಿಸಿ, ಲೈನ್‍ಮನೆಗಳಿಂದ ಬಿಡುಗಡೆ ಮಾಡಿಸಬೇಕು ಎಂದರು.   
ಕೆ.ಬಾಡಗ ವ್ಯಾಪ್ತಿಯಲ್ಲಿನ ಜಾಗವನ್ನು ಐಟಿಡಿಪಿ ಇಲಾಖೆಯ ವಶಕ್ಕೆ ಪಡೆದು ಆದಿವಾಸಿ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಈ ಗ್ರಾಮದಲ್ಲಿ ಅಸ್ಸಾಂ ಕೂಲಿ ಕಾರ್ಮಿಕರು ವಾಸ ಮಾಡುತ್ತಿದ್ದು, ಅವರನ್ನು ತೆರವುಗೊಳಿಸಬೇಕು ಎಂದು ಆದಿವಾಸಿ ಪ್ರಮುಖರೊಬ್ಬರು ಹೇಳಿದರು. 
ಲಲಿತಾ ಮತ್ತು ರಾಣಿ ಅವರು ಮಾತನಾಡಿ ಲೈನ್‍ಮನೆಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳನ್ನು ಹೊರಗೆ ತರಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವಂತಾಗಲು ಅವಕಾಶ ಮಾಡಬೇಕು ಎಂದು ಅವರು ಕೋರಿದರು. 
ರಾಮು ಅವರು ಮಾತನಾಡಿ ಆಯಿರಸುಳಿ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಿಸಿ ಸಾರಿಗೆ ಸಂಚಾರಕ್ಕೆ ಅವಕಾಶ ಮಾಡುವಂತಾಗಬೇಕು ಎಂದರು. 
 ಬೆಳಕು ಯೋಜನೆಯಡಿ ಪ್ರತೀ ಆದಿವಾಸಿ ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವಂತಾಗಬೇಕು ಎಂದು ಅವರು ಕೋರಿದರು.
ಆರ್.ಕೆ.ಚಂದ್ರ ಅವರು ಮಾತನಾಡಿ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮ ಹೀಗೆ ಹಲವು ಹೆಸರಿನಲ್ಲಿ ಅನಾದಿ ಕಾಲದಿಂದಲೂ ವಾಸ ಮಾಡಿಕೊಂಡು ಬರುತ್ತಿರುವ ಆದಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಯಾವ ಯಾವ ಹಾಡಿಗಳಲ್ಲಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಅಲ್ಲಿಯೇ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಕೋರಿದರು.  
‘ಒಟ್ಟಾರೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆದಿವಾಸಿ ಪ್ರಮುಖರ ಜೊತೆ ನಡೆದ ಸಮಾಲೋಚನ ಸಭೆಯಲ್ಲಿ ಲೈನ್‍ಮನೆಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳನ್ನು ಲೈನ್‍ಮನೆಗಳಿಂದ ಹೊರಗೆ ತರಬೇಕು. ಈ ಕುಟುಂಬಳಿಗೆ ನಿವೇಶನ ಮತ್ತು ವಸತಿ ಕಲ್ಪಿಸಿ, ಕನಿಷ್ಠ ಮೂಲಸೌಲಭ್ಯ ಕಲ್ಪಿಸಬೇಕು ಎಂಬುದು ಹೆಚ್ಚಾಗಿ ಕೇಳಿಬಂದಿತು’.  
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಆದಿವಾಸಿ ಮುಖಂಡರು, ಅರಣ್ಯ, ಸಮಾಜ ಕಲ್ಯಾಣ, ಐಟಿಡಿಪಿ ಇಲಾಖೆ ಅಧಿಕಾರಿಗಳು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ವಿರುದ್ಧ ಕಾಂಗ್ರೆಸ್‌ ಮೌನಾಸ್ತ್ರ