Publish Date: Fri, 25 Sep 2015 (13:26 IST)
Updated Date: Fri, 25 Sep 2015 (13:42 IST)
ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತಿ ಶ್ರೀಗಳು ತಮ್ಮದೇ ಮಠದಲ್ಲಿ ರಾಮಕತಾ ಗಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೇಮಲತಾ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 680 ಪುಟಗಳ ಆರೋಪ ಪಟ್ಟಿಯನ್ನು ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ಮಹತ್ವದ ಸಾಕ್ಷಿ ದೊರಕಿವೆ ಎಂಬ ಅಂಶವನ್ನು ಹೊರ ಹಾಕಿದ್ದಾರೆ.
ಮೂಲಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಶ್ರೀಗಳ ಹಾಗೂ ಪ್ರೇಮಲತಾ ಅವರ ರಕ್ತವನ್ನು ಪಡೆದು ಡಿಎನ್‌ಎ ಪರೀಕ್ಷೆ ನಡೆಸಿದ್ದಾರೆ. ಅಲ್ಲದೆ ತನಿಖೆ ವೇಳೆ ಪ್ರಮೇಲತಾ ಅವರು ನೀಡಿದ್ದ ಬಟ್ಟೆಯನ್ನೂ ಕೂಡ ಪರೀಕ್ಷೆಗೊಳಪಡಿಸಿದ್ದು, ಪರೀಕ್ಷೆಯಲ್ಲಿ ಶ್ರೀಗಳದ್ದೇ ವೀರ್ಯ ಹಾಗೂ ಪ್ರೇಮಲತಾ ಅವರ ಅಂಡಾಣು ಕೂಡ ಪತ್ತೆಯಾಗಿದ್ದು, ಹೋಲಿಕೆಯಾಗಿದೆ.
ಪ್ರೇಮಲತಾ ಅವರು ಶ್ರೀಗಳ ಕೊಠಡಿಗೆ ಆಗಾಗ ತೆರಳುತ್ತಿದ್ದರು ಎಂಬ ಮಾಹಿತಿಯನ್ನೂ ಕೂಡ ಮಠದ ಕೆಲ ಭಕ್ತರೇ ಅಧಿಕಾರಿಗಳಿಗೆ ಖುದ್ದು ಹೇಳಿಕೆ ನೀಡಿದ್ದಾರೆ ಎಂಬ ವಿಷಯವೂ ಬಹಿರಂಗಗೊಂಡಿದ್ದು, ಇದನ್ನೂ ಕೂಡ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪ ಪಟ್ಟಿಯಲ್ಲಿ 48 ಜನರಿಂದ ಪಡೆದಿರುವ ಹೇಳಿಕೆಗಳು, ಶ್ರೀಗಳು ಹಾಗೂ ಪ್ರಮೇಲತಾ ಅವರು ದೂರವಾಣಿಯಲ್ಲಿ ನಡೆಸಿರುವ ಸಂಭಾಷಣೆ, ಸ್ಥಳ ವಿವರ ಸೇರಿದಂತೆ ಇನ್ನಿತರೆ ವಿಷಯಗಳನ್ನು ಉಲ್ಲೇಖಿಸಲಾಗಿದ್ದು, ಸಿಐಡಿ ಅಧಿಕಾರಿಗಳು ಈ ಎಲ್ಲಾ ವಿವರಗಳಿರುವ 680 ಪುಟಗಳ ಆರೋಪ ಪಟ್ಟಿಯನ್ನು ನಾಳೆ ವಿಶೋಷ ಲೋಕಾಯುಕ್ತ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ನಿನ್ನೆ ಆರೋಪ ಪಟ್ಟಿಯನ್ನು ಸಲ್ಲಿಸಬಹುದು ಎಂಬ ಕಾನೂನು ಸಲಹೆ ಸಿಕ್ಕ ಹಿನ್ನೆಲೆಯಲ್ಲಿ ಸಿಐಡಿ ಈ ನಿರ್ಧಾರಕ್ಕೆ ಬಂದಿದೆ.
ಇನ್ನು ತಮ್ಮ ಮೇಲೆ ಶ್ರೀಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದ ಗಾಯಕಿ ಪ್ರಮೇಲತಾ, ನಗರದ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ ಅತ್ಯಾಚಾರ ಮತ್ತು ಸಾಕ್ಷಿಗಲಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ 506, 354 ಮತ್ತು 376(2)(ಎಫ್) ಗಳ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪರಿಣಾಮ ತನಿಖೆ ಪೂರ್ಣಗೊಳಿಸಿರುವ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಲು ಸಿದ್ಧರಾಗಿದ್ದಾರೆ.