ರಾಯಚೂರು : ರಾಜ್ಯದೆಲ್ಲೆಡೆ ಚುನಾವಣಾ ಕಾವು ದಿನೇ ದಿನೇ ಏರುತ್ತಿದೆ. ಆದರೆ ಬಿಸಿಲನಾಡು ರಾಯಚೂರಿನಲ್ಲಿ ಚುನಾವಣೆ ಬಿಸಿಯ ಜೊತೆ ಜೊತೆಗೆ ಬಿಸಿಲಿನ ತಾಪ ಕೂಡ ಏರುತ್ತಿದೆ. ಈ ವರ್ಷ ದಾಖಲೆಯ ತಾಪಮಾನ ದಾಖಲಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ರಾಯಚೂರು ಜಿಲ್ಲೆಯನ್ನು ಬಿಸಿಲನಾಡು ಎಂದು ಕರೆಯುವುದೇನೋ ನಿಜ. ಆದರೆ ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಅದರಲ್ಲೂ ಪ್ರಸ್ತುತ ಚುನಾವಣಾ ವರ್ಷದಲ್ಲಿ ರಣಬಿಸಿಲು ಎಲ್ಲರನ್ನೂ ತತ್ತರಿಸುವಂತೆ ಮಾಡುತ್ತಿದೆ. ಸದ್ಯ ಗರಿಷ್ಠ ತಾಪಮಾನ 39.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 42.5 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿಂದೆ 2016-17ರಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ವರ್ಷ ಕೂಡ ದಾಖಲೆ ಮಟ್ಟದ ತಾಪಮಾನ ದಾಖಲಾಗುವ ಮುನ್ಸೂಚನೆಯಿದೆ. ಆಗಾಗ ಎರಡು ಬಾರಿ ಅಕಾಲಿಕ ಮಳೆ ಬಂದು ಸ್ವಲ್ಪ ತಂಪೆರೆದಿತ್ತು. ಅದು ಬಿಟ್ಟರೆ ಉಳಿದ ದಿನಗಳಲ್ಲಿ ಬೆಳಗ್ಗೆ 9 ಗಂಟೆಯಾಗುತ್ತಲೇ ಸುಡುಬಿಸಿಲು ಕೇಕೆ ಹಾಕುತ್ತದೆ.
ಇದರಿಂದ ಜಿಲ್ಲೆಯ ಜನ ಮನೆಯಿಂದ ಹೊರಬರಲು ಹೆದರುವಂತಾಗಿದೆ. ಮನೆಯಲ್ಲಿದ್ದರಿಗೆ ಬಿಸಿಲಿನ ಝಳ ಸಾಕು ಎನಿಸುತ್ತಿದೆ. ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳಿನಲ್ಲಿ ಬಿಸಿಲು ಇನ್ನೂ ಹೆಚ್ಚಾಗಲಿದೆ ಎಂದು ರಾಯಚೂರು ಕೃಷಿ ವಿಜ್ಞಾನ ವಿವಿಯ ಜಿಕೆಎಂಎಸ್ ವಿಭಾಗದ ತಾಂತ್ರಿಕ ಅಧಿಕಾರಿ ಶಾಂತಪ್ಪ ದುತ್ತರಗಾಂ ತಿಳಿಸಿದ್ದಾರೆ.