Publish Date: Fri, 05 Jun 2026 (10:47 IST)
Updated Date: Fri, 05 Jun 2026 (10:54 IST)
ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದು, ರಾಜೀನಾಮೆಗೆ ಕಾರಣವನ್ನೂ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದ 13 ಶಾಸಕರ ಪೈಕಿ ರಾಮಲಿಂಗಾ ರೆಡ್ಡಿ ಕೂಡಾ ಒಬ್ಬರಾಗಿದ್ದರು. ನಿನ್ನೆ ಈ ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಅದರಂತೆ ರಾಮಲಿಂಗಾ ರೆಡ್ಡಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು.
ಆದರೆ ಅವರಿಗೆ ನಗರಾಭಿವೃದ್ಧಿ ಖಾತೆ ಬೇಕು ಎಂಬ ಬೇಡಿಕೆಯಿತ್ತು. ಆದರೆ ಅದನ್ನು ನೀಡದ ಕಾರಣಕ್ಕೆ ಹಿರಿಯ ಶಾಸಕ ಅಸಮಾಧಾನಗೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ಕೆಲಸಗಳಿಗೆ ನಾನು ಬೇಕು, ಆದರೆ ನನಗೆ ಬೇಕಾದ ಖಾತೆ ಯಾಕೆ ಕೊಡಲ್ಲ ಎಂದು ಸಿಎಂ ಮುಂದೆಯೇ ಕೂಗಾಡಿದ್ದರು ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಳಿಕ ಇಂದು ಮಾಧ್ಯಮಗಳ ಮುಂದೆ ಮಾತನಾಡಿರುವ ಅವರು ತಮ್ಮ ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ. 53 ವರ್ಷ ಕಾಂಗ್ರೆಸ್ ಗೆ ಕೆಲಸ ಮಾಡಿದ್ದೇನೆ. ಮುಂದೆಯೂ ಕಾಂಗ್ರೆಸ್ ನಲ್ಲೇ ಇರುತ್ತೇನೆ. ಎರಡೆರಡು ಬಾರಿ ನಗರಾಭಿವೃದ್ಧಿ ಖಾತೆ ಕೊಡುವುದಾಗಿ ಮಾತು ಕೊಟ್ಟು ತಪ್ಪಿದ್ದಾರೆ. ಹಿಂದೆಯೂ ನಗರಾಭಿವೃದ್ಧಿ ಖಾತೆ ಕೊಡುವುದಾಗಿ ಹೇಳಿ ಸಾರಿಗೆ ಖಾತೆ ಕೊಟ್ಟಿದ್ದರು. ಆಗಲೂ ನಾನೇನೂ ಕೇಳಿರಲಿಲ್ಲ. ಡಿಕೆ ಸುರೇಶ್ ಅವರೇ ಮನೆಗೆ ಬಂದು ಸಾರಿಗೆ ಖಾತೆ ಕೊಡುವುದಾಗಿ ಹೇಳಿದ್ದರು.ಈಗ ಎರಡನೇ ಬಾರಿ ಮಾತು ತಪ್ಪಿದ್ದಾರೆ. ಜಲಸಂಪನ್ಮೂಲ ಖಾತೆಯನ್ನು ನಾನು ಒಪ್ಪಲ್ಲ. ಅದಕ್ಕೆ ರಾಜೀನಾಮೆ ನೀಡಿದ್ದೇನೆ. ಹಾಗಂತ ನನಗೆ ಯಾರ ಮೇಲೂ ಬೇಸರವಿಲ್ಲ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ