ನಿಗದಿ ಪಡಿಸಿರುವಂತೆ ರಾಜ್ಯಸಭೆ ಚುನಾವಣೆ ನಡೆಯಲಿ ಎಂದು ಕಾಂಗ್ರೆಸ್ ನಿಯೋಗ ಇಂದು ದೆಹಲಿಗೆ ತೆರಳಿ ಕೇಂದ್ರ ಚುನಾವಣಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದೆ.
ಕೇಂದ್ರ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭೆ ಚುನಾವಣೆಗೆ ಮತ ನೀಡಿ ಎಂದು ಶಾಸಕರಿಗೆ ಕಾಂಗ್ರೆಸ್ ಪಕ್ಷ ಆಮಿಷ ಒಡ್ಡಿಲ್ಲ. ಜೆಡಿಎಸ್ ಪಕ್ಷ ಸುಳ್ಳು ವದಂತಿಗಳನ್ನು ಹರಿಬಿಡುತ್ತಿದೆ. ಆದರಿಂದ ಚುನಾವಣೆಯನ್ನು ನಿಗದಿತ ದಿನಾಂಕದಂದೆ ನಡೆಸುವಂತೆ ಕೇಂದ್ರ ಚುನಾವಣಾಧಿಕಾರಿ ನಸೀಮ್ ಜೈದ್ ಅವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಮತ ನೀಡಿ ಎಂದು ಕಾಂಗ್ರೆಸ್ ಯಾರನ್ನು ಮನವೊಲಿಸುವ ಅವಶ್ಯಕತೆ ಇಲ್ಲ. ಇಂತಹ ಪದ್ಧತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲ. ನಮ್ಮ ಬಳಿ ಹೆಚ್ಚುವರಿಯಾಗಿ 31 ಮತಗಳಿರುವುದರಿಂದ ಮೂರನೆಯ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿಯವರನ್ನು ಕಣಕ್ಕಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆದಿದೆ. ಕಾಂಗ್ರೆಸ್ ಪಕ್ಷದವರು ಶಾಸಕರ ಕ್ಷೇತ್ರಕ್ಕೆ 100 ಕೋಟಿ ಅನುದಾನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆಯನ್ನು ಮುಂದೂಡಬೇಕು ಎಂದು ಜೆಡಿಎಸ್ ಮನವಿ ಮಾಡಿಕೊಂಡಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.