Publish Date: Thu, 11 Nov 2021 (20:25 IST)
Updated Date: Thu, 11 Nov 2021 (20:27 IST)
ಬಂಗಾಳ ಕೊಲ್ಲಿಯಲ್ಲಿ ಕಂಡುಬರುತ್ತಿರುವ ವಾಯುಭಾರ ಕುಸಿತದಿಂದಾಗಿ ನ.12 ರಿಂದ ಮೂರು ದಿನ ರಾಜ್ಯದ ದಕ್ಷಿಣ ಒಳನಾಡಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ. ಈ ಹಿನ್ನೆಲೆ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯಕ್ಕೆ ತಮಿಳುನಾಡು ಕರಾವಳಿಯಲ್ಲಿ ಸುಳಿಗಾಳಿ ನಿರ್ಮಾಣವಾಗಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ನ.12 ರಂದು ಕೆಲವೆಡೆ ಭಾರಿ ಮಳೆ ಬೀಳಲಿದೆ ಎಂಬ ಮಾಹಿತಿ ದೊರೆತಿದೆ. ಪ್ರಮುಖವಾಗಿ ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲೂ ವಾಯುಭಾರ ಕುಸಿತ: ಪೂರ್ವ ಅರಬ್ಬಿ ಸಮುದ್ರದ ಮಧ್ಯದಲ್ಲಿ ಕೂಡ ಸೃಷ್ಟಿಯಾಗಿರುವ ಪ್ರಬಲ ವಾಯುಭಾರ ಕುಸಿತವು ಪಶ್ಚಿಮ ದಿಕ್ಕಿನ ಮಾರ್ಗವಾಗಿ ಹಾದು ರಾಜ್ಯದ ಕರಾವಳಿ ಸಮೀಪಿಸಿದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ಒಣ ಹವೆ: ಉತ್ತರ ಒಳನಾಡಿನಲ್ಲಿ ಹಿಂಗಾರು ಕ್ಷೀಣಿಸಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉಳಿದೆಡೆ ಒಣಹವೆ ಮುಂದುವರಿಯಲಿದೆ ಎನ್ನುವ ಮಾಹಿತಿ ದೊರೆತಿದೆ.